ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದೆ. ಇತ್ತ ಇರಾನ್ ಇದೀಗ ಹೊಸ ನಿಯಮ ಜಾರಿ ಮಾಡಿದೆ. ಹಾರ್ಮುಝ್ ಜಲಸಂಧಿ ಮೂಲಕ ಹಾದುಹೋಗುವ ಹಡುಗಗಳಿಗೆ ಭಾರೀ ಶುಲ್ಕ ವಿಧಿಸಿದೆ.
ಜಲಸಂಧಿಯ ಮೂಲಕ ಹಾದುಹೋಗಲು ಕೆಲವು ಹಡಗುಗಳಿಗೆ 2 ಮಿಲಿಯನ್ ಡಾಲರ್ (ಸುಮಾರು ರೂ. 18.8 ಕೋಟಿ) ಶುಲ್ಕ ವಿಧಿಸಲು ಇರಾನ್ ನಿರ್ಧರಿಸಿದೆ. ನಿರ್ಣಾಯಕ ಜಲಮಾರ್ಗವನ್ನು ನಿಯಂತ್ರಿಸುವ ಹೊಸ ವಿಧಾನವನ್ನು ಗುರುತಿಸುವ ಮೂಲಕ ಭಾರಿ ಪ್ರಮಾಣದ ಸುಂಕವನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯರಾಗಿರುವ ಇರಾನಿನ ಶಾಸಕ ಅಲಾಯೆದ್ದೀನ್ ಬೊರೊಜೆರ್ಡಿ ರಾಜ್ಯ ಪ್ರಸಾರಕ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (ಐಆರ್‌ಐಬಿ) ಗೆ ತಿಳಿಸಿದ್ದಾರೆ.
ದಕ್ಷಿಣ ಏಷ್ಯಾ ಸೇರಿದಂತೆ ಹಲವಾರು ರಾಷ್ಟ್ರಗಳಿಗೆ ತೈಲ ಸರಬರಾಜು ಆಗುವ ಹಾರ್ಮುಝ್ ಜಲಸಂಧಿ 33 ಕಿಮೀ ಅಗಲವಿದೆ. ಎರಡು ದೊಡ್ಡ ಭೂಖಂಡಗಳನ್ನು ಪ್ರತ್ಯೇಕಿಸುವ ಕಿರಿದಾದ ಜಲಮಾರ್ಗವನ್ನು ಜಲಸಂಧಿ ಎಂದು ಕರೆಯಲಾಗುತ್ತದೆ. ಇರಾನ್ ಈ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಪ್ರತಿದಿನ ಸುಮಾರು 2 ಕೋಟಿ ಬ್ಯಾರೆಲ್ ತೈಲ ಈ ಮಾರ್ಗದ ಮೂಲಕ ಸಾಗುತ್ತದೆ. ವಿಶ್ವದ ಒಟ್ಟು ಎಲ್‌ಎನ್‌ಜಿ ಪೂರೈಕೆಯ ಶೇ. 20ರಷ್ಟು ಭಾಗ ಇಲ್ಲಿಂದಲೇ ಸಾಗುತ್ತದೆ. ಇಲ್ಲಿಂದ ರಫ್ತಾಗುವ ಶೇ. 84ರಷ್ಟು ತೈಲ ಏಷ್ಯಾದ ಮಾರುಕಟ್ಟೆಗಳಿಗೆ ಹೋಗುತ್ತದೆ. ಇದೀಗ ಇರಾನ್ ಶುಲ್ಕದಿಂದಾಗಿ ತೈಲ ಮಾರುಕಟ್ಟೆಯಲ್ಲಿ ಏರಿಳಿತ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.



