ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಾಯಣ ಸಿನಿಮಾದ ಕುರಿತು ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚುತ್ತಿರುವ ನಡುವೆ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮಹತ್ವದ ವ್ಯವಹಾರಿಕ ನಿರ್ಧಾರ ಕೈಗೊಂಡಿದ್ದಾರೆ. ವರದಿಗಳ ಪ್ರಕಾರ, ಚಿತ್ರದ ಡಿಜಿಟಲ್ ಹಕ್ಕುಗಳಿಗಾಗಿ ಬಂದಿದ್ದ ₹700 ಕೋಟಿ ಭಾರೀ OTT ಆಫರ್ ಅನ್ನು ತಂಡ ತಿರಸ್ಕರಿಸಿದೆ. ಬದಲಿಗೆ ಇನ್ನೂ ದೊಡ್ಡ ಮೊತ್ತದ ಡೀಲ್‌ಗೆ ಕಾಯುತ್ತಿದೆ ಎನ್ನಲಾಗಿದೆ.
ನಿರ್ದೇಶಕ ನಿತೇಶ್ ತಿವಾರಿ ಅವರ ಈ ಮಹತ್ವಾಕಾಂಕ್ಷಿ ಚಿತ್ರದಲ್ಲಿ ರಣ್‌ಬೀರ್ ಕಪೂರ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಈಗಾಗಲೇ ಸಿನಿಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ವಿಶೇಷವಾಗಿ ದೃಶ್ಯ ವೈಭವ ಮತ್ತು ಭಾರಿ ಸೆಟ್‌ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿವೆ.
ಇದನ್ನೂ ಓದಿ:
ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಒಟ್ಟು ಬಜೆಟ್ ಸುಮಾರು ₹4,000 ಕೋಟಿ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಕಡಿಮೆ ಬೆಲೆಗೆ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡದೇ, ದೀರ್ಘಕಾಲಿಕ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ತಂಡ ಈಗ ₹1,000 ಕೋಟಿ ಮಟ್ಟದ OTT ಡೀಲ್ ಗುರಿಯಾಗಿಟ್ಟುಕೊಂಡಿದೆ ಎನ್ನಲಾಗಿದೆ.
ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗವನ್ನು 2026ರ ದೀಪಾವಳಿ ವೇಳೆ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಎರಡನೇ ಭಾಗ ಮುಂದಿನ ವರ್ಷದ ದೀಪಾವಳಿಗೆ ತೆರೆಗೆ ಬರಲಿದೆ.



