ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಖಾಸಗಿ ಕ್ಷಣಗಳನ್ನು ಅನುಮತಿ ಇಲ್ಲದೆ ಚಿತ್ರಿಸಿ ವೈರಲ್ ಮಾಡುವ ಪಾಪರಾಜಿ ಸಂಸ್ಕೃತಿ ವಿರುದ್ಧ ಇದೀಗ ಬಾಲಿವುಡ್‌ನಲ್ಲೂ ಧ್ವನಿ ಗಟ್ಟಿಯಾಗುತ್ತಿದೆ.
ಇತ್ತೀಚೆಗೆ ಕನ್ನಡ ನಟಿ ಸಪ್ತಮಿ ಗೌಡ ಈ ವಿಚಾರವಾಗಿ ಆಂದೋಲನಾತ್ಮಕವಾಗಿ ಮಾತನಾಡಿದ ಬಳಿಕ, ಈಗ ಬಾಲಿವುಡ್ ನಟಿ ಜಾನ್ವಿ ಕಪೂರ್ ಇದೇ ವಿಷಯದ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜಾನ್ವಿ, ಮಹಿಳಾ ಸೆಲೆಬ್ರಿಟಿಗಳ ದೇಹದ ನಿರ್ದಿಷ್ಟ ಭಾಗಗಳನ್ನು ಮಾತ್ರ ಜೂಮ್ ಮಾಡಿ ವಿಡಿಯೋಗಳನ್ನು ಹಂಚಿಕೊಳ್ಳುವುದು ಅತ್ಯಂತ ಅಸಹ್ಯಕರ ಪ್ರವೃತ್ತಿ ಎಂದು ಹೇಳಿದ್ದಾರೆ. “ನಾವು ಹೇಗೆ ಉಡುಗೆ ತೊಟ್ಟಿದ್ದೇವೆ ಎಂಬುದನ್ನು ಆಧಾರವಾಗಿಸಿಕೊಂಡು ದೇಹದ ಕೆಲವು ಭಾಗಗಳನ್ನು ಮಾತ್ರ ಹೈಲೈಟ್ ಮಾಡುವುದು ತಪ್ಪು. ಕೇವಲ ವೀಕ್ಷಣೆ ಮತ್ತು ಹಣಕ್ಕಾಗಿ ಮಹಿಳೆಯ ದೇಹವನ್ನು ಬಳಸಿಕೊಳ್ಳಲಾಗುತ್ತಿದೆ,” ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ:
ಇದು ಕೇವಲ ಗ್ಲಾಮರ್ ಕ್ಷೇತ್ರದ ಸಮಸ್ಯೆಯಲ್ಲ, ಜಾಗತಿಕ ಮಟ್ಟದಲ್ಲಿ ಮಹಿಳೆಯರನ್ನು ವಸ್ತುವಾಗಿ ಚಿತ್ರಿಸುವ ದೊಡ್ಡ ಸಮಸ್ಯೆಯ ಒಂದು ಭಾಗ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ವ್ಯಕ್ತಿಗಳಾದ ಮಹಿಳೆಯರು ಇಂತಹ ತೊಂದರೆಗಳನ್ನು ಹೆಚ್ಚಾಗಿ ಎದುರಿಸಬೇಕಾಗುತ್ತದೆ ಎಂದೂ ತಿಳಿಸಿದ್ದಾರೆ.
ಅದೇ ವೇಳೆ, ಸಮ್ಮತಿ ಎಂಬುದು ಪ್ರತಿಯೊಂದು ಹಂತದಲ್ಲೂ ಮುಖ್ಯ ಎಂದು ಜಾನ್ವಿ ಒತ್ತಿಹೇಳಿದ್ದಾರೆ. ಒಂದು ಹಾಡು ಅಥವಾ ದೃಶ್ಯದಲ್ಲಿ ತಮ್ಮ ಇಚ್ಛೆಯಿಂದ ಭಾಗವಹಿಸುವುದು ಬೇರೆ, ಆದರೆ ಅನುಮತಿ ಇಲ್ಲದೆ ತಪ್ಪು ರೀತಿಯಲ್ಲಿ ಪ್ರದರ್ಶಿಸುವುದು ಸಂಪೂರ್ಣವಾಗಿ ಅಸ್ವೀಕಾರಾರ್ಹ ಎಂದು ಅವರು ಸ್ಪಷ್ಟಪಡಿಸಿದ್ದಾರೆ.



