April 9, 2026
Thursday, April 9, 2026
spot_img

ದೇವರ ನಾಡಿನಲ್ಲಿ ಮತದಾನದ ಅಲೆ: ಶೇ. 78.21 ರಷ್ಟು ಭರ್ಜರಿ ಮತದಾನ, ಮೇ 4ಕ್ಕೆ ರಿಸಲ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

140 ವಿಧಾನಸಭಾ ಕ್ಷೇತ್ರಗಳ 30,495 ಮತಗಟ್ಟೆಗಳಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಮತದಾರರು ಅಭೂತಪೂರ್ವ ಉತ್ಸಾಹ ತೋರಿಸಿದ್ದಾರೆ. ರಾಜ್ಯಾದ್ಯಂತ ಒಟ್ಟು ಶೇ. 78.21ರಷ್ಟು ಭರ್ಜರಿ ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಈಗ ಇವಿಎಂ ಯಂತ್ರಗಳಲ್ಲಿ ಭದ್ರವಾಗಿದೆ. ಮೇ 4ರಂದು ಹೊರಬೀಳಲಿರುವ ಫಲಿತಾಂಶದ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ.

ಮತದಾನದ ಪ್ರಮುಖ ಅಂಕಿ-ಅಂಶಗಳು

ಒಟ್ಟು ಮತದಾನ: ಶೇ. 78.21

ಅತಿ ಹೆಚ್ಚು ಮತದಾನವಾದ ಕ್ಷೇತ್ರ: ಕುನ್ನತ್ತುನಾಡು (ಶೇ. 83.94)

ಅತಿ ಕಡಿಮೆ ಮತದಾನವಾದ ಜಿಲ್ಲೆ: ಪತ್ತನಂತಿಟ್ಟ (ಶೇ. 70.72)

80% ಗಡಿ ದಾಟಿದ ಜಿಲ್ಲೆಗಳು: ಪಾಲಕ್ಕಾಡ್ ಮತ್ತು ಕೋಯಿಕ್ಕೋಡ್ (ಶೇ. 81.28)

ರಾಜ್ಯದ ಹಲವು ಕ್ಷೇತ್ರಗಳಲ್ಲಿ ಶೇ. 80ಕ್ಕೂ ಅಧಿಕ ಮತದಾನವಾಗಿದ್ದು, ಇದು ರಾಜಕೀಯ ಪಕ್ಷಗಳಲ್ಲಿ ತಳಮಳ ಸೃಷ್ಟಿಸಿದೆ.

ನೇಮಂ: ಬಿಜೆಪಿಯ ರಾಜೀವ್ ಚಂದ್ರಶೇಖರ್ ಕಣಕ್ಕಿಳಿದಿರುವ ಇಲ್ಲಿ ಶೇ. 80.62ರಷ್ಟು ಮತದಾನವಾಗಿದೆ. ಇಲ್ಲಿ ಎಲ್‌ಡಿಎಫ್‌ನ ವಿ. ಶಿವನಕುಟ್ಟಿ ಮತ್ತು ಯುಡಿಎಫ್‌ನ ಕೆ.ಎಸ್. ಶಬರಿನಾಥನ್ ಪ್ರಬಲ ಪೈಪೋಟಿ ನೀಡಿದ್ದಾರೆ.

ಮಂಜೇಶ್ವರ: ಬಿಜೆಪಿಯ ಕೆ. ಸುರೇಂದ್ರನ್ ಮತ್ತು ಹಾಲಿ ಶಾಸಕ ಎ.ಕೆ.ಎಂ. ಅಶ್ರಫ್ ನಡುವಿನ ಹಣಾಹಣಿಯಲ್ಲಿ ಶೇ. 80.64ರಷ್ಟು ಮತದಾನ ದಾಖಲಾಗಿದೆ.

ಪಾಲಕ್ಕಾಡ್: ಶೋಭಾ ಸುರೇಂದ್ರನ್ (ಬಿಜೆಪಿ) ಮತ್ತು ರಮೇಶ್ ಚೆನ್ನಿತ್ತಲ (ಯುಡಿಎಫ್) ಅವರ ನಡುವಿನ ಕಾದಾಟದ ಕಣದಲ್ಲಿ ಶೇ. 82.19ರಷ್ಟು ಮತ ಚಲಾವಣೆಯಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಬಾರಿಯೂ ಎಡರಂಗ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಯುಡಿಎಫ್ ನಾಯಕ ವಿ.ಡಿ. ಸತೀಶನ್ ಅವರು 100ಕ್ಕೂ ಹೆಚ್ಚು ಸೀಟು ಗೆದ್ದು ಅಧಿಕಾರ ಹಿಡಿಯುವುದಾಗಿ ಭವಿಷ್ಯ ನುಡಿದಿದ್ದಾರೆ.

ಕಳೆದ ಬಾರಿ ಕೇವಲ 1 ಸ್ಥಾನ ಹೊಂದಿದ್ದ ಎನ್‌ಡಿಎ ಒಕ್ಕೂಟ ಈ ಬಾರಿ ಹಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡಿದ್ದು, ಫಲಿತಾಂಶದ ಗತಿಯನ್ನು ಬದಲಿಸುವ ನಿರೀಕ್ಷೆಯಲ್ಲಿದೆ.

ಕಳೆದ 1960ರಲ್ಲಿ ದಾಖಲಾಗಿದ್ದ ಶೇ. 85.77ರ ದಾಖಲೆಯನ್ನು ಈ ಬಾರಿ ಮತದಾನದ ಅಂತಿಮ ಲೆಕ್ಕಾಚಾರಗಳು ಸಮೀಪಿಸಬಹುದು ಎಂದು ಚುನಾವಣಾ ಆಯೋಗ ಅಂದಾಜಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !