ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಹೊತ್ತ ಹಡಗುಗಳ ಸಂಚಾರಕ್ಕೆ ಮತ್ತೆ ನಿರ್ಬಂಧ ಹೇರಲಾಗಿದ್ದು, ಇದರ ನಡುವೆ ಇಂದು ಭಾರತದತ್ತ ಹೊರಟ ಹಡಗನ್ನು ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ವಶಪಡಿಸಿಕೊಂಡಿದೆ.
ಒಂದೆಡೆ ಪಾಕಿಸ್ತಾನವು ಇರಾನ್ ಹಾಗೂ ಅಮೆರಿಕ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಸಲು ಸಿದ್ಧತೆ ನಡೆಸುತ್ತಿದೆ. ಇದರ ನಡುವೆ ಸಂಚಾರಿ ನಿಯಮ ಉಲ್ಲಂಘಿಸಿವೆ ಎಂಬ ಆರೋಪದಡಿ ಎರಡು ಹಡಗುಗಳನ್ನು ಐಆರ್‌ಜಿಸಿ ವಶಕ್ಕೆ ಪಡೆದುಕೊಂಡಿದೆ.
ಈ ಹಡಗುಗಳಲ್ಲಿ ಒಂದಾದ ‘ಎಪಾಮಿನೋಂಡಾಸ್’ ಲೈಬೀರಿಯಾ ಧ್ವಜವನ್ನು ಹೊಂದಿದ್ದು, ದುಬೈಯಿಂದ ಭಾರತದ ಗುಜರಾತ್ ಬಂದರು ಕಡೆ ಬರುತ್ತಿತ್ತು. ಮತ್ತೊಂದು ಹಡಗು ‘ಎಂಎಸ್‌ಸಿ ಫ್ರಾನ್ಸೆಸ್ಕಾ’ ಪನಾಮಾ ಧ್ವಜ ಹೊಂದಿದ್ದು, ಇದು ಇಸ್ರೇಲ್ ಜೊತೆ ನಂಟು ಹೊಂದಿದೆ ಎಂಬ ಕಾರಣ ನೀಡಿ ವಶಕ್ಕೆ ಪಡೆದಿದೆ. ಈ ಮೂಲಕ ಹಾರ್ಮುಜ್ ಜಲಸಂಧಿಯಲ್ಲಿನ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.



