ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಐಪಿಎಲ್‌ನ ರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಭರ್ಜರಿ ಜಯ ಸಾಧಿಸಿದೆ. ಏಪ್ರಿಲ್ 22 ರಂದು ನಡೆದ ಈ ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ ರಾಜಸ್ಥಾನ್ 40 ರನ್‌ಗಳ ಜಯ ದಾಖಲಿಸಿತು. ಈ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ಆಲ್‌ರೌಂಡರ್ ರವೀಂದ್ರ ಜಡೇಜಾ, ತಮ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ವಿಶೇಷ ವ್ಯಕ್ತಿಯೊಬ್ಬರಿಗೆ ಅರ್ಪಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಜಡೇಜಾ, ಈ ಪ್ರಶಸ್ತಿಯನ್ನು ಗುಜರಾತ್ ರಾಜ್ಯದ ಶಿಕ್ಷಣ ಸಚಿವೆ ಹಾಗೂ ತಮ್ಮ ಪತ್ನಿ ರಿವಾಬಾ ಜಡೇಜಾ ಅವರಿಗೆ ಅರ್ಪಿಸಿದರು. “ಈ ಪ್ರಶಸ್ತಿ ಗೆದ್ದಿರುವುದು ಖುಷಿ ನೀಡಿದೆ. ಆದರೆ ಇದಕ್ಕಿಂತ ಮುಖ್ಯವಾಗಿ, ನನ್ನ ಪತ್ನಿ ರಿವಾಬಾ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿಯೇ ನಾನು ಲಕ್ನೋ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತೇನೆ ಎಂದು ಭವಿಷ್ಯ ನುಡಿದಿದ್ದರು. ಅವರ ನಂಬಿಕೆ ಇಂದು ನಿಜವಾಗಿದೆ, ಅದಕ್ಕಾಗಿ ಈ ಗೌರವ ಅವರಿಗೆ ಸಲ್ಲಬೇಕು,” ಎಂದು ಜಡೇಜಾ ಭಾವುಕರಾಗಿ ನುಡಿದರು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಕುಸಿತ ಕಂಡಿತ್ತು. ಪ್ರಮುಖ ನಾಲ್ವರು ಬ್ಯಾಟರ್‌ಗಳು ಬೇಗನೇ ಪೆವಿಲಿಯನ್ ಸೇರಿದ್ದಾಗ, ತಂಡ 100 ರನ್ ಗಡಿ ದಾಟುವುದು ಕೂಡ ಕಷ್ಟ ಎಂಬಂತಾಗಿತ್ತು. ಇಂತಹ ಕಠಿಣ ಸಮಯದಲ್ಲಿ ಕ್ರೀಸ್‌ಗೆ ಬಂದ ಜಡೇಜಾ, ಶಿಮ್ರಾನ್ ಹೆಟ್ಮೆಯರ್ ಜೊತೆಗೂಡಿ ಜವಾಬ್ದಾರಿಯುತ ಆಟವಾಡಿದರು.
ಜಡೇಜಾ ಅವರ ಸ್ಕೋರ್ ಕಾರ್ಡ್:
ಬ್ಯಾಟಿಂಗ್: 29 ಎಸೆತಗಳಲ್ಲಿ ಅಜೇಯ 43 ರನ್ (2 ಬೌಂಡರಿ, 1 ಸಿಕ್ಸರ್).
ಬೌಲಿಂಗ್: 4 ಓವರ್‌ಗಳಲ್ಲಿ ಕೇವಲ 29 ರನ್ ನೀಡಿ 1 ಪ್ರಮುಖ ವಿಕೆಟ್ (ನಿಕೋಲಸ್ ಪೂರನ್).
ಈ ಪಂದ್ಯದಲ್ಲಿ ಒಂದು ವಿಶೇಷ ಕಾಕತಾಳೀಯವೆಂದರೆ, ಜಡೇಜಾ ಬ್ಯಾಟಿಂಗ್ ಮಾಡುವಾಗ ಎದುರಿಸಿದ್ದು 29 ಎಸೆತಗಳನ್ನು. ಅಚ್ಚರಿಯೆಂದರೆ, ಬೌಲಿಂಗ್ ಮಾಡುವಾಗಲೂ ಅವರು ತಮ್ಮ 4 ಓವರ್‌ಗಳ ಕೋಟಾದಲ್ಲಿ ಬಿಟ್ಟುಕೊಟ್ಟಿದ್ದು ಸರಿಯಾಗಿ 29 ರನ್‌ಗಳನ್ನು. ಈ ಶಿಸ್ತಿನ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ಸುಲಭ ಜಯ ತನ್ನದಾಗಿಸಿಕೊಂಡಿತು.



