April 26, 2026
Sunday, April 26, 2026
spot_img

‘ಧುರಂಧರ್’ಗೆ ಚಾಲೆಂಜ್ ಮಾಡೋಕೆ ಪಾಕ್ ನಲ್ಲಿ ಸಿನಿಮಾ ರೆಡಿ: ಯಾವ್ದು ಅಂತೀರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಇದೀಗ ಗಡಿಯಾಚೆ ಚರ್ಚೆಗೆ ಕಾರಣವಾಗಿದೆ. ಚಿತ್ರದಲ್ಲಿ ಪಾಕಿಸ್ತಾನದ ಲಿಯಾರಿ ಪ್ರದೇಶವನ್ನು ಬಿಂಬಿಸಿದ ರೀತಿಗೆ ಆಕ್ಷೇಪ ವ್ಯಕ್ತವಾಗಿದ್ದು, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ತನ್ನದೇ ಕಥೆಯನ್ನು ಹೇಳಲು ‘ಮೇರಾ ಲಿಯಾರಿ’ ಎಂಬ ಹೊಸ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದೆ.

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ನಲ್ಲಿ ರಣವೀರ್ ಸಿಂಗ್ ಗೂಢಚರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲಿಯಾರಿ ಪ್ರದೇಶದ ಗ್ಯಾಂಗ್ ಸಂಘರ್ಷ, ಅಂಡರ್‌ವರ್ಡ್ ಚಟುವಟಿಕೆಗಳು ಮತ್ತು ಉಗ್ರರ ಜಾಲದ ವಿರುದ್ಧದ ಕಾರ್ಯಾಚರಣೆಯನ್ನು ಕಥೆಯ ಕೇಂದ್ರಬಿಂದುವಾಗಿಸಲಾಗಿದೆ. ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಕಲೆಕ್ಷನ್‌ನಲ್ಲೂ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ:

ಆದರೆ, ಲಿಯಾರಿಯನ್ನು ಅಪರಾಧದ ನೆಲೆಯಾಗಿ ಮಾತ್ರ ತೋರಿಸಿರುವುದು ಸರಿಯಲ್ಲ ಎಂದು ಪಾಕಿಸ್ತಾನದಲ್ಲಿ ಟೀಕೆ ವ್ಯಕ್ತವಾಗಿದೆ. ಅಲ್ಲಿನ ರಾಜಕೀಯ ಮತ್ತು ಸಿನಿಮಾ ವಲಯ ಈ ಚಿತ್ರವನ್ನು ಏಕಪಕ್ಷೀಯ ಚಿತ್ರಣ ಎಂದು ಆರೋಪಿಸಿದೆ. ಇದರ ಬೆನ್ನಲ್ಲೇ ‘ಮೇರಾ ಲಿಯಾರಿ’ ಸಿನಿಮಾ ರೂಪುಗೊಂಡಿದ್ದು, ಲಿಯಾರಿಯ ಇನ್ನೊಂದು ಮುಖವನ್ನು ಅನಾವರಣಗೊಳಿಸುವ ಪ್ರಯತ್ನ ನಡೆದಿದೆ.

ಈ ಚಿತ್ರದಲ್ಲಿ ಲಿಯಾರಿ ಪ್ರದೇಶದ ಯುವತಿಯರ ಕ್ರೀಡಾ ಆಸಕ್ತಿ, ವಿಶೇಷವಾಗಿ ಫುಟ್‌ಬಾಲ್ ಮೇಲಿನ ಅಭಿಮಾನವನ್ನು ಕಥೆಯಾಗಿ ಹೇಳಲಾಗುತ್ತಿದೆ. ಕ್ರೀಡೆ ಮತ್ತು ಕನಸುಗಳ ಮೂಲಕ ಆ ಪ್ರದೇಶದ ಧನಾತ್ಮಕ ಚಿತ್ರಣ ನೀಡುವ ಉದ್ದೇಶ ಚಿತ್ರತಂಡಕ್ಕಿದೆ.

ಒಟ್ಟಾರೆ, ಪರದೆಯ ಮೇಲಿನ ಕಥೆ ಇದೀಗ ದೇಶಗಳ ನಡುವಿನ ಸಾಂಸ್ಕೃತಿಕ ಪ್ರತಿಕ್ರಿಯೆಯ ರೂಪ ಪಡೆದುಕೊಂಡಿದ್ದು, ‘ಮೇರಾ ಲಿಯಾರಿ’ ಪ್ರೇಕ್ಷಕರ ಮನ ಗೆಲ್ಲುತ್ತದೆಯೇ ಎಂಬ ಕುತೂಹಲ ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !