ಚಿಕ್ಕ ಮಕ್ಕಳು ಮುದ್ದಾಗಿದ್ದರೆ ಹಾಗೂ ಚೂಟಿಯಾಗಿದ್ದರೆ ಅವರ ಮೇಲೆ ದೃಷ್ಟಿ ಅಥವಾ ಕೆಟ್ಟ ಕಣ್ಣು ಬೀಳುವುದು ಸಹಜ. ಅಂತಹ ದೃಷ್ಟಿ ದೋಷವನ್ನು ನಿವಾರಿಸಲು ನಮ್ಮಲ್ಲಿ ಹಲವು ಸಾಂಪ್ರದಾಯಿಕ ಆಚರಣೆಗಳಿವೆ. ಮಕ್ಕಳಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಕಿರಿಕಿರಿ ಅಥವಾ ಅನಾರೋಗ್ಯಕ್ಕೆ ಈ ದೃಷ್ಟಿದೋಷವೇ ಕಾರಣವೆಂದು ಹೇಳಲಾಗುತ್ತದೆ. ಕೆಲವರಿಗೆ ಮಕ್ಕಳ ಮೇಲೆ ಆಸೆ ಇದ್ದರೂ ಮಕ್ಕಳಾಗಿರೋದಿಲ್ಲ, ಕೆಲವರಿಗೆ ಮೊಮ್ಮಕ್ಕಳು ಮೊಮ್ಮಕ್ಕಳು ಬೇಕಾಗಿರುತ್ತದೆ ಆದರೆ ಮಕ್ಕಳು ಇನ್ನೂ ಸ್ವಲ್ಪ ದಿನ ಎಂದಿರುತ್ತಾರೆ. ಇನ್ನು ಕೆಲವರು ಮಕ್ಕಳನ್ನು ಕಳೆದುಕೊಂಡಿರಬಹುದು. ನಮ್ಮ ಮಗು ಇದ್ದಿದ್ದರೆ ಇಷ್ಟು ವಯಸ್ಸಾಗಿರುತ್ತಿತ್ತು, ನೋಡೋಕೆ ಹೀಗೇ ಇರುತ್ತಿದ್ದಳು ಇತ್ಯಾದಿ ಭಾವನೆಗಳನ್ನು ಹೊಂದಿರುತ್ತಾರೆ. ಆ ಮಕ್ಕಳಿಗೆ ಕೆಟ್ಟದಾಗಲಿ ಎಂದು ಶಪಿಸದೇ ಇದ್ದರೂ ಕೆಟ್ಟದಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವಾರಕ್ಕೆ ಎರಡು ಮೂರು ಬಾರಿ ದೃಷ್ಟಿ ತೆಗೆಯೋದು ಉತ್ತಮ.
ದೃಷ್ಟಿ ನಿವಾರಣೆಗೆ ಕೆಲವು ಸಾಂಪ್ರದಾಯಿಕ ವಿಧಾನಗಳು..
ಮಗುವಿನ ಮೇಲೆ ದೃಷ್ಟಿ ತಾಗದೆ ಇರಲ್ಲಿ ಎಂದು ಕಿವಿಯ ಹಿಂದೆ, ಪಾದದ ಅಡಿಯಲ್ಲಿ ಅಥವಾ ಹಣೆಯ ಒಂದು ಬದಿಯಲ್ಲಿ ಸಣ್ಣದಾಗಿ ಕಾಡಿಗೆ ಬೊಟ್ಟು ಇಡಲಾಗುತ್ತದೆ. ಇದು ಮಗುವಿನ ಅಂದಕ್ಕೆ ಒಂದು ಸಣ್ಣ ದೋಷವನ್ನು ಉಂಟುಮಾಡುವ ಮೂಲಕ ಕೆಟ್ಟ ದೃಷ್ಟಿಯನ್ನು ತಡೆಯುತ್ತದೆ.
ಹಳ್ಳಿಗಳಲ್ಲಿ ಅಜ್ಜಿಯಂದಿರು 7 ಒಣ ಮೆಣಸಿನಕಾಯಿ, ಸ್ವಲ್ಪ ಹರಳು ಉಪ್ಪು ಮತ್ತು ಸಾಸಿವೆ, ಈರುಳ್ಳಿ ಸಿಪ್ಪೆ,ಬೆಳ್ಳುಳ್ಳಿ ಸಿಪ್ಪೆ ತೆಗೆದುಕೊಂಡು. ಅದನ್ನು ಮಗುವಿನ ಸುತ್ತ 3, 5 ಅಥವಾ 7 ಬಾರಿ ಪ್ರದಕ್ಷಿಣೆ ಅಥವಾ ಅಪ್ರದಕ್ಷಿಣೆಯಾಗಿ ಸುತ್ತಿ, ನಂತರ ಬೆಂಕಿಗೆ ಹಾಕಿ ಸುಡುತ್ತಾರೆ. ಆಗ ಅದು ಚಟ್‌ಪಟ್ ಎಂದ ಮೇಲೆ ಆ ಬೂದಿಯನ್ನು ಮಗುವಿಗೆ ಹಚ್ಚುತ್ತಾರೆ.
ಕೆಲವು ಕಡೆ ಒಂದು ಸಣ್ಣ ಪಟಿಕದ ಕಲ್ಲನ್ನು ಮಗುವಿನ ತಲೆಯ ಸುತ್ತ ಸುತ್ತಿ, ನಂತರ ಅದನ್ನು ಒಲೆಯ ಮೇಲೆ ಹಾಕಿ ಸುಡಬೇಕು. ಇದು ಮಗುವಿನ ಮೇಲೆ ಬಿದ್ದಂತಹ ಕೆಟ್ಟದೃಷ್ಟಿಯನ್ನು ನಿವಾರಿಸುತ್ತದೆ.
ಅಡುಗೆ ಮಾಡಿದ ನಂತರ ಬಿಸಿಯಾದ ಕಾವಲಿಯ ಮೇಲೆ ನೀರು ಸುರಿಯುವುದು ಅಥವಾ ಮಗುವಿನ ಸುತ್ತ ಸುತ್ತಿದ್ದ ನೀರನ್ನು ಹೊರಗೆ ಚೆಲ್ಲುವ ಮೂಲಕ ದೃಷ್ಟಿ ದೋಷವನ್ನು ನಿವಾರಿಸಲಾಗುತ್ತದೆ.
ಮಗುವನ್ನು ಮನೆಯಿಂದ ಆಚೆ ಕೆರದುಕೊಂಡು ಹೋಗಿ ವಾಪಸ್ ಮನೆಗೆ ಬಂದಾಗ ಕೆಂಪು ಒಕಳಿ ಮಾಡಿ, 5 ತರದ ಹೂಗಳಿಂದ ದೃಷ್ಟಿ ತೆಗೆದು ಮನೆಯ ಹೊರಗೆ ಚೆಲ್ಲುತ್ತಾರೆ. ಇದರಿಂದ ಹೊರಗಡೆ ಹೋದಾಗ ಏನಾದರು ಕೆಟ್ಟ ದೃಷ್ಟಿ ಬಿದ್ದರೆ ನಿವಾರಣೆಯಾಗುತ್ತದೆ.
ಮಗುವಿನ ಕಾಲಿಗೆ, ಕೈಗೆ ಕಪ್ಪು ದಾರ ಅಥವಾ ದೃಷ್ಟಿದಾರನ್ನು ಕಟ್ಟಲಾಗುತ್ತದೆ ಇದು ಮಗುವಿನ ಮೇಲೆ ಕೆಟ್ಟ ದೃಷ್ಟಿ ಬೀಳದಂತೆ ಕಾಪಾಡುತ್ತದೆ.



