ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ ‘3 ಈಡಿಯಟ್ಸ್’ ಚಿತ್ರದ ಮುಂದುವರಿದ ಭಾಗ ‘4 ಈಡಿಯಟ್ಸ್’ ಚಿತ್ರದಲ್ಲಿ ನಟ ವಿಕ್ಕಿ ಕೌಶಲ್ ನಟಿಸುವ ಕುರಿತು ಇದೀಗ ಮಾತುಕತೆಗಳು ನಡೆಯುತ್ತಿವೆ. ಅಮೀರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಐಕಾನಿಕ್ ತಂಡಕ್ಕೆ ವಿಕ್ಕಿ ಕೌಶಲ್ ‘ನಾಲ್ಕನೇ ಈಡಿಯಟ್’ ಆಗಿ ಸೇರಿಕೊಳ್ಳುವ ಸಾಧ್ಯತೆಯಿದೆ.
ರಾಜಕುಮಾರ್ ಹಿರಾನಿ ಮತ್ತು ಅಭಿಜಾತ್ ಜೋಶಿ ಪ್ರಸ್ತುತ ಈ ಚಿತ್ರದ ಚಿತ್ರಕಥೆಯನ್ನು ಸಿದ್ಧಪಡಿಸುತ್ತಿದ್ದು, ಈ ಸಿನಿಮಾವು 2027ರಲ್ಲಿಚಿತ್ರೀಕರಣವನ್ನು ಆರಂಭಿಸುವ ನಿರೀಕ್ಷೆಯಿದೆ. ಅಮೀರ್ ಖಾನ್ ನೀಡಿರುವ ಸುಳಿವಿನ ಪ್ರಕಾರ, ಕಥೆಯು ‘3 ಈಡಿಯಟ್ಸ್’ ಮುಕ್ತಾಯವಾದ 10 ವರ್ಷಗಳ ನಂತರದ ಜೀವನವನ್ನು ಆಧರಿಸಿದೆ.
ರಾಜಕುಮಾರ್ ಹಿರಾನಿ ಜತೆ ಈಗಾಗಲೇ ‘ಸಂಜು’ ಮತ್ತು ‘ಡಂಕಿ’ ಚಿತ್ರಗಳಲ್ಲಿ ಕೆಲಸ ಮಾಡಿರುವ ವಿಕ್ಕಿ ಕೌಶಲ್, ಈ ಸ್ಕ್ರಿಪ್ಟ್ ಕೇಳಿ ಬಹಳ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಕ್ಕಿ ಮತ್ತು ಅಮೀರ್ ಖಾನ್ ನಡುವೆ ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಈ ಸಿನಿಮಾ ಆರಂಭವಾಗುವ ಮೊದಲು ವಿಕ್ಕಿ ಕೌಶಲ್ ತಮ್ಮ ‘ಮಹಾವತಾರ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘3 ಈಡಿಯಟ್ಸ್’ ಒಂದು ಮೈಲಿಗಲ್ಲು ಸೃಷ್ಟಿಸಿದ ಸಿನಿಮಾ ಆಗಿರುವುದರಿಂದ, ಅದರ ಮುಂದುವರಿದ ಭಾಗದ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ಭಾರಿ ಕುತೂಹಲ ಮೂಡಿದೆ.



