May 8, 2026
Friday, May 8, 2026
spot_img

ದೆಹಲಿಯಲ್ಲಿ ಸಂಚಲನ ಮೂಡಿಸಿದ ದಾಳಿ ಸಂಚು: ಐಎಸ್‌ಐ ಜಾಲ ಬಯಲಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ದೆಹಲಿಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗುವಂತಹ ದಾಳಿ ಯೋಜನೆ ಒಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪಾಕಿಸ್ತಾನ ಬೆಂಬಲಿತ ಗುಪ್ತಚರ ಜಾಲವು ದೆಹಲಿ ಹಾಗೂ ಉತ್ತರ ಭಾರತದ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿತ್ತು ಎಂಬ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ. ಬಂಧಿತ ಆರೋಪಿಗಳ ವಿಚಾರಣೆಯ ವೇಳೆ ಹಲವು ಬೆಚ್ಚಿಬೀಳಿಸುವ ಸಂಗತಿಗಳು ಬಹಿರಂಗವಾಗಿವೆ.

ದೆಹಲಿ ಪೊಲೀಸ್ ವಿಶೇಷ ಘಟಕ ನಡೆಸಿದ ಕಾರ್ಯಾಚರಣೆಯಲ್ಲಿ ಹಲವು ರಾಜ್ಯಗಳಿಂದ ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದು, ಅವರ ಬಳಿ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ದೆಹಲಿಯ ಐತಿಹಾಸಿಕ ದೇವಾಲಯವೊಂದು ಪ್ರಮುಖ ಗುರಿಯಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ದೇವಾಲಯದ ಭದ್ರತಾ ವ್ಯವಸ್ಥೆ, ಅಲ್ಲಿನ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ರಹಸ್ಯ ಮಾಹಿತಿ ಸಂಗ್ರಹಿಸಿ ವಿದೇಶಿ ಸಂಪರ್ಕಗಳಿಗೆ ಕಳುಹಿಸಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ:

ಇದರ ಜೊತೆಗೆ ದೆಹಲಿ-ಸೋನಿಪತ್ ಹೆದ್ದಾರಿಯಲ್ಲಿರುವ ಜನಪ್ರಿಯ ಢಾಬಾವೊಂದನ್ನೂ ಗುರಿಯಾಗಿಸಿ ಜನಸಂದಣಿ ನಡುವೆ ದಾಳಿ ನಡೆಸುವ ಯತ್ನವಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಹರಿಯಾಣದ ಮಿಲಿಟರಿ ಶಿಬಿರದ ಮೇಲೂ ಕಣ್ಣಿಟ್ಟಿದ್ದ ಜಾಲವು ಅಲ್ಲಿನ ದೃಶ್ಯಾವಳಿಗಳನ್ನು ಸಂಗ್ರಹಿಸಿತ್ತು ಎಂಬ ಮಾಹಿತಿ ತನಿಖೆಗೆ ಹೊಸ ತಿರುವು ನೀಡಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ದೆಹಲಿ, ಹರಿಯಾಣ ಹಾಗೂ ಉತ್ತರ ಪ್ರದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪ್ರಕರಣದ ಸಂಪೂರ್ಣ ಜಾಲವನ್ನು ಭೇದಿಸಲು ತನಿಖೆ ತೀವ್ರಗೊಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !