ದೇಹದಲ್ಲಿ ಕೊಬ್ಬಿನ ಪ್ರಮಾಣ ಮಿತಿಮೀರಿ ಹೆಚ್ಚಾಗುವುದು ಕೇವಲ ತೂಕ ಹೆಚ್ಚಾಗುವ ಸಮಸ್ಯೆಯಲ್ಲ ಇದು ಇಡೀ ದೇಹದ ಆಂತರಿಕ ಆರೋಗ್ಯ ವ್ಯವಸ್ಥೆ ಏರುಪೇರಾಗುತ್ತಿರುವುದರ ಸ್ಪಷ್ಟ ಸಂಕೇತವಾಗಿದೆ. ಕೊಬ್ಬು ಹೆಚ್ಚಾದಾಗ ನಮ್ಮ ದೇಹವು ಸುಮ್ಮನೆ ಇರುವುದಿಲ್ಲ, ಬದಲಿಗೆ ಹಲವು ದೈಹಿಕ ಆರೋಗ್ಯದ ಲಕ್ಷಣಗಳ ಮೂಲಕ ನಮಗೆ ಎಚ್ಚರಿಕೆಯ ಕರೆಗಳನ್ನು ನೀಡುತ್ತಿರುತ್ತದೆ. ಈ ಆರಂಭಿಕ ಲಕ್ಷಣಗಳನ್ನು ಸಕಾಲದಲ್ಲಿ ಗುರುತಿಸದಿದ್ದರೆ, ಅದು ಭವಿಷ್ಯದಲ್ಲಿ ಹೃದಯ ಕಾಯಿಲೆ, ಮಧುಮೇಹ ಮತ್ತು ಕೀಲುಗಳ ಸವೆತದಂತಹ ದೀರ್ಘಕಾಲದ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.
ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗಿರುವುದರ ಕೇವಲ ಲಕ್ಷಣಗಳು:
ಸೊಂಟದ ಸುತ್ತ ಮತ್ತು ಹೊಟ್ಟೆಯ ಭಾಗದಲ್ಲಿ ಕೊಬ್ಬು ಅತಿಯಾಗಿ ಶೇಖರಣೆಯಾಗುತ್ತದೆ. ಇದು ಆಂತರಿಕ ಅಂಗಗಳ ಸುತ್ತ ಕೊಬ್ಬು ಬೆಳೆಯುತ್ತಿರುವುದರ ಸ್ಪಷ್ಟ ಸಂಕೇತವಾಗಿದ್ದು, ಇದರಿಂದ ಹೆಚ್ಚಾಗಿ ಆಯಾಸವಾಗುತ್ತದೆ.
ಹೊಟ್ಟೆಯ ಭಾಗದ ಕೊಬ್ಬು ಜೀರ್ಣಾಂಗಗಳ ಮೇಲೆ ಒತ್ತಡ ಹೇರುವುದರಿಂದ ಗ್ಯಾಸ್ಟ್ರಿಕ್, ಎದೆಯುರಿ ಮತ್ತು ಆಸಿಡಿಟಿ ಸಮಸ್ಯೆಗಳು ಪದೇ ಪದೇ ಕಾಡುತ್ತವೆ.
ಕುತ್ತಿಗೆಯ ಸುತ್ತ ಕೊಬ್ಬು ಹೆಚ್ಚಾದಾಗ ಉಸಿರಾಟದ ನಳಿಕೆ ಕಿರಿದಾಗುತ್ತದೆ. ಇದರಿಂದ ರಾತ್ರಿ ನಿದ್ರೆಯಲ್ಲಿ ಗೊರಕೆ ಹೊಡೆಯುವುದು ಮತ್ತು ಉಸಿರಾಟಕ್ಕೆ ತೊಂದರೆಯಾಗಿ ನಿದ್ರೆ ಹೀನತೆಗೆ ಕಾರಣವಾಗುತ್ತದೆ.
ಕುತ್ತಿಗೆಯ ಹಿಂಭಾಗ, ಕಂಕುಳು ಮತ್ತು ತೊಡೆಗಳ ಸಂದಿಗಳಲ್ಲಿ ಚರ್ಮವು ದಪ್ಪವಾಗಿ, ಕಪ್ಪಗಾಗಲು ಆರಂಭವಾಗುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರತಿರೋಧ ಹೆಚ್ಚಿರುವುದರ ಸಂಕೇತವಾಗಿದೆ.
ಕೊಬ್ಬು ದೇಹದಲ್ಲಿ ಇನ್ಸುಲೇಟರ್ನಂತೆ ಕೆಲಸ ಮಾಡುತ್ತದೆ. ಇದು ದೇಹದ ಶಾಖವನ್ನು ಹೊರಗೆ ಹೋಗದಂತೆ ತಡೆಯುವುದರಿಂದ, ಸಾಮಾನ್ಯ ವಾತಾವರಣದಲ್ಲೂ ಅತಿಯಾಗಿ ಬೆವರುವಿಕೆ ಉಂಟಾಗುತ್ತದೆ.



