ಹೊಸದಿಗಂತ ವರದಿ ತುಮಕೂರು:
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಬಿಕ್ಕೆಗುಡ್ಡ ಗ್ರಾಮದ ಸಮೀಪ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಸೈಬರ್ ಪೊಲೀಸರು ದಾಳಿ ನಡೆಸಿ 14 ಮಂದಿಯನ್ನು ವಶಕ್ಕೆ ಪಡೆದು 69 ಸಾವಿರ ರೂ ನಗದು ಜಪ್ತಿ ಮಾಡಿದ್ದಾರೆ. ಈ ಪ್ರಕರಣ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಗುಬ್ಬಿ ತಾಲೂಕಿನಲ್ಲಿ ಜೂಜಾಟ ಅಡ್ಡೆಗಳು ಯಾವುದೇ ಭಯವಿಲ್ಲದೆ ಹೆಚ್ಚಾಗುತ್ತಿವೆ ಎನ್ನಲಾಗಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಕೆಲ ಪ್ರಕರಣಗಳನ್ನು ಮಾತ್ರ ದಾಖಲಿಸಿದ್ದ ಸ್ಥಳೀಯ ಪೊಲೀಸರು, ನಂತರ ಜೂಜಾಟ ಅಡ್ಡೆಗಳ ವಿರುದ್ಧ ಹೆಚ್ಚಿನ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಅಕ್ರಮ ಇಸ್ಪೀಟ್ ದಂಧೆ ತಾಲೂಕಿನಲ್ಲಿ ಗರಿಗೆದರಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಕೊನೆಗೂ ಜಿಲ್ಲಾ ಸೈಬರ್ ಠಾಣೆಯ ಡಿವೈಎಸ್ಪಿ ಜಯಲಕ್ಷ್ಮಿ ನೇತೃತ್ವದ ತಂಡ ದಾಳಿ ನಡೆಸಿ 14 ಮಂದಿಯನ್ನು ಬಂಧಿಸಿದೆ. ಬಂಧಿತರಿಂದ ₹69 ಸಾವಿರ ನಗದು,14 ಮೊಬೈಲ್ ಫೋನ್‌ಗಳು ಹಾಗೂ 14 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ಎರಡು ದೊಡ್ಡ ಕ್ಯಾಂಟರ್ ವಾಹನಗಳಲ್ಲಿ ಗುಬ್ಬಿ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಒಂದರಲ್ಲಿ ಆರೋಪಿಗಳು ಮತ್ತು ಮತ್ತೊಂದರಲ್ಲಿ ವಾಹನಗಳನ್ನು ತರಲಾಗಿತ್ತು. ಈ ದೃಶ್ಯ ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿತು.
ಇದನ್ನೂ ಓದಿ:
ಈ ಕುರಿತು 14 ಮಂದಿಯ ವಿರುದ್ಧ ಕಲಂ 87ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾ ಸೈಬರ್ ಪೊಲೀಸರ ಈ ದಾಳಿಯಿಂದ ಗುಬ್ಬಿ ಭಾಗದ ಜೂಜುಕೋರರಲ್ಲಿ ನಡುಕ ಹುಟ್ಟಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ವೆಂಕಟ್ ಅಕ್ರಮ ಜೂಜಾಟಕ್ಕೆ ಕಡಿವಾಣ ಹಾಕುವರೇ ಎಂಬುದು ಕಾದು ನೋಡಬೇಕಿದೆ.



