ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದಿಲೀಪ್ ರಾಜ್ ನಿಧನದ ಸುದ್ದಿಯನ್ನು ಇಡೀ ಸ್ಯಾಂಡಲ್‌ವುಡ್ ಅರಗಿಸಿಕೊಳ್ಳಲಾರದೆ ಕಣ್ಣೀರಿಡುತ್ತಿದೆ.
ಇತ್ತೀಚೆಗಷ್ಟೇ ಲವ್ ಮಾಕ್ಟೇಲ್ 3 ಸಿನಿಮಾದಲ್ಲಿ ದಿಲೀಪ್ ಕಾಣಿಸಿಕೊಂಡಿದ್ದರು. 47ರ ಪ್ರಾಯದಲ್ಲಿಯೂ ದಿಲೀಪ್ ಯುವಕನಂತೆ ಕಾಣಿಸಿದ್ದರು. ರಾತ್ರಿ ಕಳೆದು ಹಗಲು ಬರುವುದರೊಳಗೆ ಹೃದಯಾಘಾತ ದಿಲೀಪ್ ಉಸಿರು ಕಸಿದುಕೊಂಡಿದೆ.
ದಿಲೀಪ್ ರಾಜ್ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ ಮತ್ತು ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. 2007ರಲ್ಲಿ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಚಿತ್ರದಲ್ಲಿ ಖಳನಾಯಕನ ಪಾತ್ರದ ಮೂಲಕ ಇವರು ಭಾರಿ ಜನಪ್ರಿಯತೆ ಗಳಿಸಿದರು.
ಯು ಟರ್ನ್, ಅಂಬಿ ನಿಂಗೆ ವಯಸ್ಸಾಯ್ತೋ, ಬಾಯ್ ಫ್ರೆಂಡ್, ಲವ್ ಮಾಕ್ಟೇಲ್ 3, ಗಾನ ಬಜಾನ, ಟೋನಿ, ಬರ್ಫಿ, ಸುಗ್ರೀವ, 7 ಓ ಕ್ಲಾಕ್, ಕ್ಷಣ ಕ್ಷಣ, ಮಹಾನ್ ನಾಯಕ, ಆಟೋ ರಾಜ, ಮಿಂಚಾಗಿ ನೀ ಬರಲು, ಮಹಿರ, ಆರ್ಕೆಸ್ಟ್ರಾ ಮೈಸೂರು ಸೇರಿದಂತೆ 24ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅದೇ ರೀತಿ ಕಿರುತೆರೆಯ ಮೂಲಕವೇ ತಮ್ಮ ವೃತ್ತಿಜೀವನ ಆರಂಭಿಸಿದ ದಿಲೀಪ್ ರಾಜ್ ಅನೇಕ ಹಿಟ್ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಜೀ ಕನ್ನಡದ ಸೂಪರ್ ಹಿಟ್ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ದ ಎ.ಜೆ’ (ಅಭಿರಾಮ್ ಜಯಶಂಕರ್) ಪಾತ್ರದ ಮೂಲಕ ಇವರು ಕರ್ನಾಟಕದ ಪ್ರತಿ ಮನೆಯಲ್ಲೂ ಚಿರಪರಿಚಿತರಾಗಿದ್ದರು. ಅಷ್ಟೆ ಅಲ್ಲದೇ, ರಂಗೋಲಿ, ಮಾಂಗಲ್ಯ, ರಥಸಪ್ತಮಿ, ಕಂಬದ ಮನೆ, ಜನನಿ, ಕುಂಕುಮ ಭಾಗ್ಯ, ಅರ್ಧ ಸತ್ಯ, ಪ್ರೀತಿಗಾಗಿ ಎಂಬತಹ ಜನಪ್ರಿಯ ದಾರವಾಹಿಗಳಲ್ಲಿ ನಟಿಸಿದ್ದಾರೆ.
ಜತೆಗೆ ತಮ್ಮ ಪತ್ನಿ ಶ್ರೀವಿದ್ಯಾ ಅವರೊಂದಿಗೆ ಸೇರಿ ‘ದೃತಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಪಾರು, ವಿದ್ಯಾ ವಿನಾಯಕ, ಹಿಟ್ಲರ್ ಕಲ್ಯಾಣದಂತಹ ಜನಪ್ರಿಯ ಸೀರಿಯಲ್‌ಗಳನ್ನು ನಿರ್ಮಿಸಿ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.



