ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಟಿಯರನ್ನು ಗುರಿಯಾಗಿಸಿಕೊಂಡು ಅಸಭ್ಯ ಕಮೆಂಟ್ ಮಾಡುವುದು ಹಾಗೂ ಟ್ರೋಲ್ ಮಾಡುವುದು ಕೆಲವರಿಗೆ ಹವ್ಯಾಸವಾಗಿಬಿಟ್ಟಿದೆ. ಆದರೆ, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಖ್ಯಾತಿಯ ನಟಿ ಚೈತ್ರಾ ಜೆ. ಆಚಾರ್ ತಮಗೆ ಬಂದ ಕೆಟ್ಟ ಸಂದೇಶವನ್ನು ಸಹಿಸದೆ, ಕಿಡಿಗೇಡಿಗೆ ಸಾರ್ವಜನಿಕವಾಗಿಯೇ ತಕ್ಕ ಪಾಠ ಕಲಿಸಿದ್ದಾರೆ.
‘ಮಹೇಶ್ ಹೊಸಮನಿ’ (@hosamani53) ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ನಟಿ ಚೈತ್ರಾ ಆಚಾರ್ ಅವರಿಗೆ ಅತ್ಯಂತ ಅಸಭ್ಯ ಹಾಗೂ ಕೆಟ್ಟ ಪದಗಳನ್ನು ಬಳಸಿ ಸಂದೇಶ ಕಳುಹಿಸಲಾಗಿತ್ತು. ಆ ಕಿಡಿಗೇಡಿಯ ಪ್ರೊಫೈಲ್ ಚಿತ್ರದಲ್ಲಿ ಆತ ಪೊಲೀಸ್ ಸಮವಸ್ತ್ರ ಧರಿಸಿದ್ದುದು ನಟಿಯ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ತಮಗೆ ಬಂದ ಅಸಭ್ಯ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಚೈತ್ರಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮುಚ್ಚುಮರೆಯಿಲ್ಲದೆ ನೇರವಾಗಿ ಪ್ರಕಟಿಸಿ. ಬೆಂಗಳೂರು ಸಿಟಿ ಪೊಲೀಸರ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿ, ಗೌರವಾನ್ವಿತ ಬೆಂಗಳೂರು ಸಿಟಿ ಪೊಲೀಸ್ ಅವರೇ, ಈ ವ್ಯಕ್ತಿ ನಿಮ್ಮ ಇಲಾಖೆಯವನು ಎಂದು ತೋರುತ್ತಿದೆ. ಇವನು ಕೇಳಿದ ಅಸಭ್ಯ ಪ್ರಶ್ನೆಗೆ ದಯವಿಟ್ಟು ನೀವೇ ಉತ್ತರ ನೀಡುತ್ತೀರಾ?” ಎಂದು ನೇರವಾಗಿ ಪ್ರಶ್ನಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನಟಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರನ್ನು ಟ್ಯಾಗ್ ಮಾಡುತ್ತಿದ್ದಂತೆ ಹೆದರಿದ ಮಹೇಶ್ ಹೊಸಮನಿ, ತಕ್ಷಣವೇ ನಟಿಗೆ ಮತ್ತೊಂದು ಸಂದೇಶ ಕಳುಹಿಸಿ ಕ್ಷಮೆಯಾಚಿಸಿದ್ದಾನೆ. “ನನ್ನ ವೃತ್ತಿಜೀವನಕ್ಕೆ ಸಮಸ್ಯೆಯಾಗುತ್ತದೆ, ದಯವಿಟ್ಟು ಇನ್‌ಸ್ಟಾಗ್ರಾಮ್ ಸ್ಟೋರಿ ತೆಗೆಯಿರಿ, ನಾನು ನಿಮ್ಮ ಅಭಿಮಾನಿ” ಎಂದು ಆತ ಗೋಗರೆದಿದ್ದಾನೆ. ಸದ್ಯ ಆತ ತನ್ನ ಖಾತೆಯ ಎಲ್ಲಾ ವಿವರಗಳನ್ನು ಹೈಡ್ ಮಾಡಿಕೊಂಡಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ನಟಿಯರ ಬಟ್ಟೆ ಅಥವಾ ಫೋಟೋಶೂಟ್‌ಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವ ಟ್ರೋಲರ್‌ಗಳಿಗೆ ಚೈತ್ರಾ ಆಚಾರ್ ನೀಡಿರುವ ಈ ದಿಟ್ಟ ಪ್ರತಿಕ್ರಿಯೆಯನ್ನು ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



