ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸ್ಪೋಟಕ ಬ್ಯಾಟಿಂಗ್ ನಡೆಸಿದ್ದು, ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿ, ಗುಜರಾತ್ ಗೆಲುವಿಗೆ 248 ರನ್‌ಗಳ ಬಿಗ್ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ತಂಡಕ್ಕೆ ಅಜಿಂಕ್ಯ ರಹಾನೆ ಮತ್ತು ಫಿನ್ ಅಲೆನ್ ಉತ್ತಮ ಆರಂಭವನ್ನು ನೀಡಿದರು. ಆದರೆ ರಹಾನೆ 14 ರನ್ ಗಳಿಸಿ ಔಟಾದರು.ಬಳಿಕ ಅಂಗ್‌ಕ್ರಿಶ್ ರಘುವಂಶಿ , ಅಲೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಅಲೆನ್ ಕೇವಲ 35 ಎಸೆತಗಳಲ್ಲಿ 10 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳನ್ನು ಒಳಗೊಂಡಂತೆ 93 ರನ್ ಗಳಿಸಿ ಶತಕ ವಂಚಿತರಾದರು.
ಅಲೆನ್ ಬಳಿಕ ಬಂದ ಗ್ರೀನ್ ಕೂಡ ಅಂಗ್‌ಕ್ರಿಶ್ ಜೊತೆಗೆ ಭರ್ಜರಿ ಬ್ಯಾಟಿಂಗ್ ಮಾಡಿದರು. ಈ ಜೋಡಿ 52 ಎಸೆತಗಳಲ್ಲಿ 108 ರನ್‌ಗಳ ಜೊತೆಯಾಟವಾಡುವ ಮೂಲಕ ಕೆಕೆಆರ್ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು. ರಘುವಂಶಿ 44 ಎಸೆತಗಳಲ್ಲಿ ಅಜೇಯ 82 ರನ್‌ಗಳ ಕೊಡುಗೆ ನೀಡಿದರು. ಕ್ಯಾಮರೂನ್ ಗ್ರೀನ್ ಕೂಡ 52 ರನ್ ಗಳಿಸಿದರು.



