ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಟಾ ಐಪಿಎಲ್ 2026 ರ 62 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್, ಪ್ರಸಕ್ತ ಟೂರ್ನಿಯಲ್ಲಿ ತನ್ನ 6ನೇ ಗೆಲುವನ್ನು ಸಂಭ್ರಮಿಸಿದೆ. ಈ ರೋಚಕ ಜಯದೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದ್ದರೆ, ಇತ್ತ ಡೆಲ್ಲಿ ವಿರುದ್ಧ ಮುಗ್ಗರಿಸಿದ ರಾಜಸ್ಥಾನ್ ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಸಂಕೀರ್ಣಗೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್, ಆರಂಭಿಕ ಆಘಾತದ ಹೊರತಾಗಿಯೂ ಭರ್ಜರಿ ಮೊತ್ತ ಕಲೆಹಾಕಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಕೇವಲ 21 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 46 ರನ್ ಚಚ್ಚಿದರು. ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ (19) ಬೇಗನೆ ಔಟಾದ ನಂತರ, ಸೂರ್ಯವಂಶಿ ಮತ್ತು ಧ್ರುವ್ ಜುರೆಲ್ ಜೋಡಿ ಎರಡನೇ ವಿಕೆಟ್‌ಗೆ ಕೇವಲ 34 ಎಸೆತಗಳಲ್ಲಿ 70 ರನ್‌ಗಳ ಸ್ಫೋಟಕ ಜೊತೆಯಾಟವಾಡಿತು.
ನಂತರ ನಾಯಕ ರಿಯಾನ್ ಪರಾಗ್ (40 ಎಸೆತಗಳಲ್ಲಿ 53 ರನ್) ಹಾಗೂ ಧ್ರುವ್ ಜುರೆಲ್ ಮೂರನೇ ವಿಕೆಟ್‌ಗೆ 41 ಎಸೆತಗಳಲ್ಲಿ 72 ರನ್ ಸೇರಿಸಿ ತಂಡ ಬೃಹತ್ ಮೊತ್ತದತ್ತ ಹೆಜ್ಜೆಯಿಡುವಂತೆ ಮಾಡಿದರು. ಆದರೆ ಒಂದು ಹಂತದಲ್ಲಿ 200 ರನ್‌ಗಳ ಗಡಿ ದಾಟುವ ಮುನ್ಸೂಚನೆ ನೀಡಿದ್ದ ರಾಜಸ್ಥಾನ್ ದಿಢೀರ್ ಕುಸಿತ ಕಂಡಿತು. ಕೊನೆಯ ಓವರ್‌ಗಳಲ್ಲಿ ಕೇವಲ 30 ರನ್ ಅಂತರದಲ್ಲಿ ರಾಜಸ್ಥಾನ್ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು, ನಿಗದಿತ 20 ಓವರ್‌ಗಳಲ್ಲಿ 193 ರನ್‌ಗಳಿಗೆ ಸೀಮಿತವಾಯಿತು.
ಡೆಲ್ಲಿ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಕಿತ್ತರೆ, ಲುಂಗಿ ಎನ್‌ಗಿಡಿ ಮತ್ತು ಮಾಧವ್ ತಿವಾರಿ ತಲಾ 2 ವಿಕೆಟ್ ಪಡೆದು ರಾಜಸ್ಥಾನ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ರಾಜಸ್ಥಾನ್ ನೀಡಿದ 194 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕರಾದ ಅಭಿಷೇಕ್ ಪೋರೆಲ್ ಮತ್ತು ಕೆ.ಎಲ್. ರಾಹುಲ್ ಮೊದಲ ವಿಕೆಟ್‌ಗೆ 105 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿ ಜಯದ ಹಾದಿಯನ್ನು ಸುಲಭಗೊಳಿಸಿದರು. ಜವಾಬ್ದಾರಿಯುತ ಆಟವಾಡಿದ ಅಭಿಷೇಕ್ 31 ಎಸೆತಗಳಲ್ಲಿ 51 ರನ್ ಬಾರಿಸಿದರೆ, ಕ್ಲಾಸ್ ಇನ್ನಿಂಗ್ಸ್ ಆಡಿದ ಕೆ.ಎಲ್ ರಾಹುಲ್ 42 ಎಸೆತಗಳಲ್ಲಿ 56 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಮಧ್ಯಮ ಕ್ರಮಾಂಕದಲ್ಲಿ ಕೆಲ ವಿಕೆಟ್‌ಗಳು ಪತನಗೊಂಡಾಗ, ನಾಯಕನ ಆಟ ಪ್ರದರ್ಶಿಸಿದ ಅಕ್ಷರ್ ಪಟೇಲ್ ಅಜೇಯ 34 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಇಂಪ್ಯಾಕ್ಟ್ ಪ್ಲೇಯರ್ ಅಶುತೋಷ್ ಶರ್ಮಾ ಕೇವಲ 5 ಎಸೆತಗಳಲ್ಲಿ 18 ರನ್ ಚಚ್ಚಿ ಅಜೇಯರಾಗಿ ಉಳಿಯುವ ಮೂಲಕ ಡೆಲ್ಲಿಗೆ ಸ್ಮರಣೀಯ ಜಯ ತಂದುಕೊಟ್ಟರು.



