ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಲಾತೂರ್‌ನ ಪ್ರಸಿದ್ಧ RCC ಕೋಚಿಂಗ್ ಸಂಸ್ಥೆಯ ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ ಅವರನ್ನು ಸಿಬಿಐ ಬಂಧಿಸಿದೆ. NEET ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಪಡೆದು ಹಂಚಿಕೆ ಮಾಡಿದ ಆರೋಪ ಅವರ ಮೇಲಿದೆ.
ಮೊಬೈಲ್‌ನಲ್ಲಿ ಪತ್ತೆಯಾದ ಪ್ರಶ್ನೆ ಪತ್ರಿಕೆ
ಭಾನುವಾರ ಸಿಬಿಐ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಶಿವರಾಜ್ ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಬಳಿಕ ಅವರನ್ನು ಬಂಧಿಸಿ ವಿಚಾರಣೆ ಆರಂಭಿಸಲಾಗಿದೆ. ಈ ಪ್ರಕರಣದಲ್ಲಿ ಸಂಘಟಿತ ಗ್ಯಾಂಗ್ ಕಾರ್ಯನಿರ್ವಹಿಸುತ್ತಿತ್ತು ಎಂದು ಸಿಬಿಐ ಶಂಕೆ ವ್ಯಕ್ತಪಡಿಸಿದೆ.
ಇದನ್ನೂ ಓದಿ:
ಒಂಬತ್ತು ಶಾಖೆಗಳಿದ್ದ ಕೋಚಿಂಗ್ ನೆಟ್‌ವರ್ಕ್
ಶಿವರಾಜ್ ನಡೆಸುತ್ತಿದ್ದ RCC ತರಬೇತಿ ಸಂಸ್ಥೆ ಲಾತೂರ್ ಸೇರಿ ಒಟ್ಟು 9 ಶಾಖೆಗಳನ್ನು ಹೊಂದಿದೆ. ಆರೋಪಿಗಳು ಏಪ್ರಿಲ್ 23ರಂದೇ ಪ್ರಶ್ನೆ ಪತ್ರಿಕೆ ಪಡೆದು ವಿವಿಧ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಇದುವರೆಗೆ 10 ಮಂದಿ ಅರೆಸ್ಟ್
ಈ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ, ಪುಣೆ, ಜೈಪುರ, ಗುರುಗ್ರಾಮ್ ಸೇರಿದಂತೆ ಹಲವು ನಗರಗಳಲ್ಲಿ ಸಿಬಿಐ ದಾಳಿ ನಡೆಸಿದ್ದು, ಇದುವರೆಗೆ 10 ಮಂದಿಯನ್ನು ಬಂಧಿಸಿದೆ. ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ಉಪನ್ಯಾಸಕರನ್ನೂ ಈಗಾಗಲೇ ವಶಕ್ಕೆ ಪಡೆಯಲಾಗಿದೆ.



