September 20, 2026
Sunday, September 20, 2026
spot_img

ಅಕ್ರಮ ನುಸುಳುಕೋರರನ್ನು ಬಂಧಿಸಿ ಬಿಎಸ್‌ಎಫ್ ವಶಕ್ಕೆ ನೀಡಿ: ಸಿಎಂ ಸುವೇಂದು ಅಧಿಕಾರಿ ಖಡಕ್ ಆದೇಶ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರಕಾರವು ನುಸುಳುಕೋರರ ವಿರುದ್ಧ ಖಡಕ್ ನಿರ್ಧಾರ ತೆಗೆದುಕೊಂಡಿದ್ದು, ಗಡಿಭಾಗಗಳಲ್ಲಿ ಅಕ್ರಮ ನುಸುಳುಕೋರರ ಸಮಸ್ಯೆಗೆ ಶಾಶ್ವತ ಬ್ರೇಕ್ ಹಾಕಲು ಮುಂದಾಗಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ವಿದೇಶಿ ನುಸುಳುಕೋರರ ವಿರುದ್ಧ ಕಾರ್ಯಾಚರಣೆ ಶುರುಮಾಡಿದ ಸಿಎಂ ಸುವೇಂದು, ಇದೀಗ ಅಂತವರನ್ನು ಪತ್ತೆಹಚ್ಚಿ, ಮತದಾರರ ಪಟ್ಟಿಯಿಂದ ತೆಗೆದುಹಾಕಿ, ಗಡೀಪಾರು ಮಾಡುವ ತ್ರಿಪಕ್ಷೀಯ ನೀತಿಯನ್ನು ಜಾರಿಗೆ ತಂದಿದ್ದಾರೆ.

ಗಡಿಭಾಗದ ಭದ್ರತೆಗೆ ಆದೇಶ

ಬಿಎಸ್ಎಫ್ ಪ್ರಧಾನ ನಿರ್ದೇಶಕ ಪ್ರವೀಣ್ ಕುಮಾರ್ ಅವರ ಸಮ್ಮುಖದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಗಡಿಭಾಗದ ಭದ್ರತೆಗೆ ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಗೃಹ ಕಾರ್ಯದರ್ಶಿಗಳಿಗೆ ಆದೇಶ ನೀಡಿದ್ದಾರೆ.

ಬಿಎಸ್‌ಎಫ್ ಗೆ ಹಸ್ತಾಂತರ

ಪ್ರತಿಯೊಬ್ಬ ಅಕ್ರಮ ನುಸುಳುಕೋರನ್ನು ರಾಜ್ಯ ಪೊಲೀಸರು ಪತ್ತೆಹಚ್ಚಿ, ಬಂಧಿಸಿ ನ್ಯಾಯಾಲಯಗಳ ಮುಂದೆ ಹಾಜರುಪಡಿಸುವ ಬದಲು ನೇರವಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗೆ ಹಸ್ತಾಂತರಿಸಬೇಕು. ಬಳಿಕ ಬಿಎಸ್ಎಫ್ ಅಧಿಕಾರಿಗಳು ಬಾಂಗ್ಲಾದೇಶದ ಗಡಿ ರಕ್ಷಣಾ ಪಡೆ ಜೊತೆ ಮಾತುಕತೆ ನಡೆಸಿ ಅವರನ್ನು ನೇರವಾಗಿ ಗಡೀಪಾರು ಮಾಡಲಿದ್ದಾರೆ. ಈ ನೀತಿ ಇಂದಿನಿಂದಲೇ ಜಾರಿಗೆ ಬರುತ್ತಿದೆ ಎಂದು ಸಿಎಂ ಸುವೇಂದು ಅಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ.

ಅಕ್ರಮ ಒಳನುಸುಳುವಿಕೆಗೆ ಬ್ರೇಕ್

ಬಂಗಾಳದಲ್ಲಿ ಕೇಂದ್ರ ಸರ್ಕಾರಡ ಸಿಎಎ ನಿಯಮಾವಳಿಗಳನ್ನು ಹಿಂದಿನ ಸರ್ಕಾರ ಸರಿಯಾಗಿ ಅನುಷ್ಠಾನಕ್ಕೆ ತಂದಿರಲಿಲ್ಲ. ಆದರೆ ನಮ್ಮ ಸರ್ಕಾರ ಸಿಎಎ ಅಡಿಯಲ್ಲಿ ರಕ್ಷಣೆ ಪಡೆದಿರುವ ಹಿಂದು ನಿರಾಶ್ರಿತರು ಮತ್ತು ಇತರ ಅರ್ಹ ಸಮುದಾಯಗಳನ್ನು ಹೊರತುಪಡಿಸಿ, ಉಳಿದ ಅಕ್ರಮ ಒಳನುಸುಳುವಿಕೆಯನ್ನು ಶೂನ್ಯ ಸಹಿಷ್ಣುತೆ ಆಧಾರದಲ್ಲಿ ಹತ್ತಿಕ್ಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಎಸ್ಎಫ್‌ಗೆ ಅಗತ್ಯ ಭೂಮಿ ಹಸ್ತಾಂತರ

ಗಡಿ ಭದ್ರತೆಯನ್ನು ಗಟ್ಟಿಗೊಳಿಸಲು ಬಿಎಸ್ಎಫ್‌ಗೆ ಅಗತ್ಯ ಭೂಮಿ ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿ, ಐದು ಗಡಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 27 ಕಿ.ಮೀ ಉದ್ದದ ಬೇಲಿ ನಿರ್ಮಾಣಕ್ಕಾಗಿ ಒಟ್ಟು 75 ಎಕರೆ ಭೂಮಿಯನ್ನು ಬಿಎಸ್ಎಫ್‌ಗೆ ಹಸ್ತಾಂತರಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !