May 27, 2026
Wednesday, May 27, 2026
spot_img

ಸಿಎಂ ಕುರ್ಚಿ ಸುತ್ತ ‘ಬಿರುಗಾಳಿ’: ಸಿದ್ದರಾಮಯ್ಯ ಮೌನ ಆಪ್ತರಲ್ಲಿ ಹೆಚ್ಚಿದ ಟೆನ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತ ರಾಜಕೀಯ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಸಿಎಂ ಆಪ್ತ ವಲಯದಲ್ಲಿ ಆತಂಕ ಹೆಚ್ಚಾಗಿದೆ.

ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಮಾತುಕತೆಗಳ ನಡುವೆ ಸಿಎಂ ನಿವಾಸದಲ್ಲಿ ನಡೆದ ಸಭೆ ಹಲವು ಕುತೂಹಲಗಳಿಗೆ ಕಾರಣವಾಗಿದೆ.

“ಸಿಎಂ ಮೌನವಾಗಿದ್ದರು” ಎಂದ ಸಚಿವರು

ಸಿಎಂ ಜೊತೆ ನಡೆದ ಸಭೆಯ ಬಳಿಕ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ರಾಜೀನಾಮೆ ಸುದ್ದಿಯ ಬಗ್ಗೆ ನಾವು ಕಳವಳ ವ್ಯಕ್ತಪಡಿಸಿದ್ದೇವೆ. ಆದರೆ ಈ ವಿಚಾರಕ್ಕೆ ಸಿದ್ದರಾಮಯ್ಯ ಅವರು ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದರು ಎಂದು ಹೇಳಿದರು. ಸಭೆಯಲ್ಲಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಗಂಭೀರ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ.

ಅಹಿಂದ ನಾಯಕರಿಂದ ಹೈಕಮಾಂಡ್‌ಗೆ ಎಚ್ಚರಿಕೆ

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಾರೆ ಎಂದು ಹೇಳಿದರು. ಇದೇ ವೇಳೆ ಅಹಿಂದ ಸಂಘಟನೆಯ ನಾಯಕ ರಾಮಚಂದ್ರಪ್ಪ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಯತ್ನ ನಡೆದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಅಹಿಂದ ವರ್ಗದ ಮತಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಈ ಸಮುದಾಯದ ನಾಯಕತ್ವವನ್ನು ಕಡೆಗಣಿಸಬಾರದು ಎಂದು ಆಗ್ರಹಿಸಿದರು.

ಇದನ್ನೂ ಓದಿ:

ಎರಡು ಗಂಟೆಗಳ ಸಭೆಯಲ್ಲಿ ಭವಿಷ್ಯದ ಚರ್ಚೆ

ಸಿದ್ದರಾಮಯ್ಯ ಅವರು ತಮ್ಮ ಆಪ್ತರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿದ್ದು, ಹೈಕಮಾಂಡ್ ನಾಯಕರ ಜೊತೆ ನಡೆದ ಮಾತುಕತೆ ಹಾಗೂ ರಾಜೀನಾಮೆ ಕುರಿತ ಬೆಳವಣಿಗೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಮುಂದಿನ ರಾಜಕೀಯ ಬೆಳವಣಿಗೆಗಳು ಮತ್ತು ತಮ್ಮ ಭವಿಷ್ಯದ ಬಗ್ಗೆ ಆಪ್ತ ಶಾಸಕರು ಆತಂಕ ವ್ಯಕ್ತಪಡಿಸಿದ್ದು, ಸಭೆಯಲ್ಲಿ ಈ ಕುರಿತ ಚರ್ಚೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !