June 1, 2026
Monday, June 1, 2026
spot_img

ಪ್ರತಿಭೆಗೆ ಪ್ರಭು ಚವ್ಹಾಣ್ ಗೌರವದ ಗರಿ: 900 ವಿದ್ಯಾರ್ಥಿಗಳಿಗೆ ಸನ್ಮಾನ ಸಂಭ್ರಮ

ಹೊಸದಿಗಂತ ವರದಿ ಬೀದರ್:

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜೂನ್ 5ರಂದು ಪಟ್ಟಣದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕ ಪ್ರಭು ಬಿ. ಚವ್ಹಾಣ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯ ತಲಾ ಮೂರು ಟಾಪರ್ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಪ್ರಥಮ ಸ್ಥಾನ ಪಡೆದವರಿಗೆ ₹21 ಸಾವಿರ, ದ್ವಿತೀಯ ಸ್ಥಾನಕ್ಕೆ ₹11 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ ₹7 ಸಾವಿರ ಬಹುಮಾನ ನೀಡಲಾಗುವುದು. ಜೊತೆಗೆ ಔರಾದ ಮತ್ತು ಕಮಲನಗರ ತಾಲ್ಲೂಕಿನ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಉಡುಗೊರೆಯೊಂದಿಗೆ ಸನ್ಮಾನಿಸಲಾಗುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಬೆಂಬಲ ನೀಡಿದ ಪೋಷಕರು, ಶಿಕ್ಷಕರು ಹಾಗೂ ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯಗುರುಗಳಿಗೂ ಗೌರವ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ:

2009ರಿಂದ ಪ್ರತಿಭೆಗಳಿಗೆ ಬೆಂಬಲ: ಶಿಕ್ಷಣ ಅಭಿವೃದ್ಧಿಗೆ ನಿರಂತರ ಒತ್ತು

ಕ್ಷೇತ್ರದ ಶೈಕ್ಷಣಿಕ ಬೆಳವಣಿಗೆಯನ್ನು ಪ್ರಮುಖ ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವುದಾಗಿ ಶಾಸಕ ಪ್ರಭು ಚವ್ಹಾಣ ತಿಳಿಸಿದ್ದಾರೆ. ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ 2009ರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸನ್ಮಾನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಆದರ್ಶ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ

ಇದೇ ವೇಳೆ ಔರಾದ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಪ್ರಭು ಚವ್ಹಾಣ, ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪರಿಗಣಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು. ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸುವ ಜೊತೆಗೆ ಉತ್ತಮ ಫಲಿತಾಂಶಕ್ಕಾಗಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !