ಗರ್ಭಾವಸ್ಥೆಯು ಮಹಿಳೆಯ ಜೀವನದ ಅತ್ಯಂತ ಪ್ರಮುಖ ಘಟ್ಟ. ಈ ಸಮಯದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಗರ್ಭಾವಸ್ಥೆಯಲ್ಲಿ ಎದುರಾಗುವ ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ‘ಗರ್ಭಿಣಿ ಸನ್ನಿ’ (Eclampsia) ಅತ್ಯಂತ ಅಪಾಯಕಾರಿ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಎಕ್ಲಾಂಪ್ಸಿಯಾ ಅಥವಾ ಗರ್ಭಾವಸ್ಥೆಯ ಫಿಟ್ಸ್ (ಸೆಳೆತ) ಎನ್ನಲಾಗುತ್ತದೆ. ಇದು ತಾಯಿ-ಮಗುವಿನ ಜೀವಕ್ಕೆ ಕಂಟಕ ತರಬಲ್ಲ ತುರ್ತು ವೈದ್ಯಕೀಯ ಪರಿಸ್ಥಿತಿಯಾಗಿದೆ.
ಗರ್ಭಿಣಿ ಸನ್ನಿ (ಎಕ್ಲಾಂಪ್ಸಿಯಾ) ಎಂದರೇನು?
ಗರ್ಭಧಾರಣೆಯ 20 ವಾರಗಳ ನಂತರ, ಹೆರಿಗೆಯ ಸಮಯದಲ್ಲಿ ಅಥವಾ ಹೆರಿಗೆಯಾದ ತಕ್ಷಣ ತಾಯಿಗೆ ತೀವ್ರ ರಕ್ತದೊತ್ತಡದಿಂದ (High BP) ಇದ್ದಕ್ಕಿದ್ದಂತೆ ಫಿಟ್ಸ್ ಬರುವುದನ್ನು ‘ಗರ್ಭಿಣಿ ಸನ್ನಿ’ ಎನ್ನಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಬಿಪಿ ಹೆಚ್ಚಾಗುವ ‘ಪ್ರಿಕ್ಲಾಂಪ್ಸಿಯಾ’ (Preeclampsia) ಸ್ಥಿತಿಗೆ ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ಅದು ಎಕ್ಲಾಂಪ್ಸಿಯಾ ಆಗಿ ಬದಲಾಗುತ್ತದೆ.
ಎಕ್ಲಾಂಪ್ಸಿಯಾ ಬರಲು ಮುಖ್ಯ ಕಾರಣಗಳು
ಜರಾಯುವಿನ (Placenta) ದೋಷ: ಗರ್ಭಕೋಶದಲ್ಲಿ ಮಗುವಿಗೆ ರಕ್ತ ಮತ್ತು ಪೌಷ್ಟಿಕಾಂಶ ಪೂರೈಸುವ ಜರಾಯು ಸರಿಯಾಗಿ ಅಭಿವೃದ್ಧಿಯಾಗದಿರುವುದು.
ತೀವ್ರ ರಕ್ತದೊತ್ತಡ: ಬಿಪಿ ಮಟ್ಟ 140/90 mmHg ಗಿಂತ ಹೆಚ್ಚಾಗುವುದು ಮತ್ತು ಮೂತ್ರದಲ್ಲಿ ಪ್ರೊಟೀನ್ ಅಂಶ ಅತಿಯಾಗಿ ಹೊರಹೋಗುವುದು (ಕಿಡ್ನಿ ಸಮಸ್ಯೆ).
ವಯಸ್ಸು ಮತ್ತು ವಂಶವಾಹಿ: ಮೊದಲ ಬಾರಿಗೆ ಗರ್ಭಿಣಿಯಾದವರಲ್ಲಿ, 35 ವರ್ಷ ಮೇಲ್ಪಟ್ಟವರಲ್ಲಿ ಮತ್ತು ಕುಟುಂಬದಲ್ಲಿ ಈ ಮುಂಚೆ ಯಾರಿಗಾದರೂ ಗರ್ಭಿಣಿ ಸನ್ನಿ ಇದ್ದರೆ ಇದರ ಅಪಾಯ ಹೆಚ್ಚು.
ಇತರ ಆರೋಗ್ಯ ಸಮಸ್ಯೆಗಳು: ಗರ್ಭಧಾರಣೆಗೆ ಮುನ್ನವೇ ಮಧುಮೇಹ, ಮೂತ್ರಪಿಂಡದ ಕಾಯಿಲೆ, ಬೊಜ್ಜು ಇರುವುದು ಅಥವಾ ಗರ್ಭದಲ್ಲಿ ಅವಳಿ-ಜವಳಿ ಮಕ್ಕಳಿದ್ದಾಗ ಪ್ಲಾಸೆಂಟಾ ಮೇಲಿನ ಒತ್ತಡ ಹೆಚ್ಚಾಗುವುದು.
ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳು
ನಿಯಮಿತ ಆರೋಗ್ಯ ತಪಾಸಣೆ: ಗರ್ಭಿಣಿಯರು ಪ್ರತಿ ತಿಂಗಳು ತಪ್ಪದೇ ರಕ್ತದೊತ್ತಡ ಮತ್ತು ಮೂತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕು.
ವೈದ್ಯರ ಸಲಹೆ ಮತ್ತು ಔಷಧಿ: ಪ್ರಿಕ್ಲಾಂಪ್ಸಿಯಾ ಅಪಾಯವಿರುವವರಿಗೆ ವೈದ್ಯರು 12ನೇ ವಾರದಿಂದಲೇ ಕಡಿಮೆ ಡೋಸೇಜ್‌ನ ಆಸ್ಪಿರಿನ್ ಮಾತ್ರೆಗಳನ್ನು ಸೂಚಿಸುತ್ತಾರೆ.
ಆಹಾರ ಕ್ರಮ: ಉಪ್ಪಿನ ಬಳಕೆಯನ್ನು ಮಿತಿಗೊಳಿಸಬೇಕು. ಹಸಿರು ತರಕಾರಿ, ತಾಜಾ ಹಣ್ಣುಗಳು ಮತ್ತು ಕ್ಯಾಲ್ಸಿಯಂಯುಕ್ತ ಪೌಷ್ಟಿಕ ಆಹಾರವನ್ನು ಸೇವಿಸಬೇಕು.



