September 26, 2026
Saturday, September 26, 2026
spot_img

ಅವಳಿಲ್ಲದ ಬದುಕು ಬೇಡ…! ಪ್ರೇಯಸಿಯ ಮರ್ಯಾದಾ ಹ*ತ್ಯೆ: ನೋವು ತಾಳಲಾರದೆ ಪ್ರಿಯಕರನ ಆತ್ಮಹ*ತ್ಯೆ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದ ಕೃಷ್ಣಾ ಪಾಟೀಲ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕೃಷ್ಣಾ ಪಾಟೀಲ್ ಹಾಗೂ ಹುಕ್ಕೇರಿ ತಾಲೂಕಿನ ಸತ್ಯವ್ವ ಹೆಳವಿ ಪರಸ್ಪರ ಪ್ರೀತಿಸುತ್ತಿದ್ದು, ಒಪ್ಪಿಗೆಯಿಂದ ಮನೆ ಬಿಟ್ಟು ಹೋಗಿದ್ದರು. ಬಳಿಕ ಪೊಲೀಸರು ಅವರನ್ನು ಪತ್ತೆಹಚ್ಚಿ ಮನೆಗಳಿಗೆ ಕಳುಹಿಸಿದ್ದರು.

ಬಳಿಕ ಸತ್ಯವ್ವಳ ತವರು ಮನೆಯವರು ಆಕೆಯನ್ನು ಮಹಾರಾಷ್ಟ್ರದ ಅರಗ ಗ್ರಾಮಕ್ಕೆ ಕರೆದೊಯ್ದು ಬೇರೆ ಮದುವೆಯಾಗುವಂತೆ ಒತ್ತಾಯಿಸಿದ್ದರು. ಆದರೆ ಕೃಷ್ಣಾನನ್ನು ಬಿಟ್ಟು ಬೇರೆ ಮದುವೆಯಾಗುವುದಿಲ್ಲ ಎಂದು ಸತ್ಯವ್ವ ಪಟ್ಟು ಹಿಡಿದಿದ್ದ ಹಿನ್ನೆಲೆಯಲ್ಲಿ, ಕುಟುಂಬಸ್ಥರೇ ಆಕೆಯನ್ನು ಮರ್ಯಾದಾ ಹತ್ಯೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕೃಷ್ಣಾ ಪಾಟೀಲ್ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು.

ಇದನ್ನೂ ಓದಿ:

ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಪ್ರಕರಣವನ್ನು ಮಹಾರಾಷ್ಟ್ರದ ಮಿರಜ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ಪ್ರೇಯಸಿಯ ಸಾವಿನ ಆಘಾತ ಮತ್ತು ಪ್ರಕರಣದ ನೋವಿನಿಂದ ಮನನೊಂದಿದ್ದ ಕೃಷ್ಣಾ, ಸತ್ಯವ್ವಳ ಜನ್ಮದಿನದಂದೇ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read