June 29, 2026
Monday, June 29, 2026
spot_img

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಠಿಣ ಕ್ರಮ ಕೈಗೊಳ್ಳಿ: ಗೋಪಿನಾಥ್ ಪಳಿನಿಯಪ್ಪನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ನಡೆಸಿದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೈಕಿ ಶೇ. 89ರಷ್ಟು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಪಳಿನಿಯಪ್ಪನ್ ಆರೋಪಿಸಿದರು.

ಸೋಮವಾರ ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಸೇರಿದಂತೆ ವಿವಿಧ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಗ್ಗಿಸಿವೆ ಎಂದು ಹೇಳಿದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇವಲ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಸಾಕಾಗುವುದಿಲ್ಲ. ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವವರೆಗೆ ಕಾಂಗ್ರೆಸ್ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು. ಅವರ ಪಾತ್ರ ಸೇರಿದಂತೆ ಪ್ರಕರಣದ ಎಲ್ಲ ಆಯಾಮಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಸಾವಿರಾರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಕೆಲವರು ಆತ್ಮಹತ್ಯೆಯಂತಹ ದುರ್ಘಟನೆಗಳಿಗೆ ಬಲಿಯಾಗಿರುವುದು ಅತ್ಯಂತ ದುಃಖಕರ ಸಂಗತಿ. ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ದೇಶದಾದ್ಯಂತ ನಡೆಯುವ ಕೇಂದ್ರ ಮಟ್ಟದ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಆದರೆ ಪರೀಕ್ಷೆಗಳ ವಿಶ್ವಾಸಾರ್ಹತೆ ಕುಸಿಯುತ್ತಿರುವುದು ಅತ್ಯಂತ ಗಂಭೀರ ವಿಷಯವಾಗಿದ್ದು, ಈ ಕುರಿತು ಕೇಂದ್ರ ಸರ್ಕಾರ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಶಾಸಕ ಆಸೀಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಸದಾನಂದ ಡಂಗಣ್ಣವರ, ಸುನೀಲ ಹನುಮಣ್ಣವರ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಅಂಕಲಗಿ, ಸುಧಾಕರ ಬಡಿಗೇರ್, ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !