July 5, 2026
Sunday, July 5, 2026
spot_img

ಕೇರಳದಲ್ಲಿ ಜನನ ಪ್ರಮಾಣ ಭಾರೀ ಕುಸಿತ: ಬೆಚ್ಚಿಬೀಳಿಸುವ ಅಂಕಿ-ಅಂಶ ಬಹಿರಂಗಗೊಳಿಸಿದೆ ಪೋಲಿಯೊ ಲಸಿಕೆ ಅಭಿಯಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ವರ್ಷದಿಂದ ವರ್ಷಕ್ಕೆ ಜನನ ಪ್ರಮಾಣದಲ್ಲಿ ಸತತವಾಗಿ ಇಳಿಕೆಯಾಗುತ್ತಿರುವುದನ್ನು ಪೋಲಿಯೊ ನಿರ್ಮೂಲನಾ ಅಭಿಯಾನದ ಬಹಿರಂಗಗೊಳಿಸಿದ್ದು, ಈ ಅಂಕಿಅಂಶಗಳು ಆತಂಕಕಾರಿಯಾಗಿದೆ.


ಆರೋಗ್ಯ ತಜ್ಞರ ಪ್ರಕಾರ, ಜನನ ಪ್ರಮಾಣದಲ್ಲಿ ನಿರಂತರ ಕುಸಿತಕ್ಕೆ ದಂಪತಿಗಳಲ್ಲಿ ‘ಒಂದು ಮಗು ಸಾಕು’ ಎಂಬ ಮನೋಭಾವ ಹೆಚ್ಚುತ್ತಿರುವುದು ಕಾರಣವಾಗುತ್ತಿದೆ. ಜೊತೆಗೆ ವಿವಾಹ ಮುಂದೂಡುವ, ವಿವಾಹವಾಗದೇ ಇರುವ ಯುವಜನರ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳಿ ಅಲ್ಲೇ ಶಾಶ್ವತವಾಗಿ ನೆಲೆಸುತ್ತಿರುವ ಕುಟುಂಬಗಳ ಸಂಖ್ಯೆಯೂ ಇದಕ್ಕೆ ಪೂರಕವಾಗುತ್ತಿದೆ.


ಪೋಲಿಯೊ ಲಸಿಕೆ ಪಡೆಯಬೇಕಾದ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ ಕಳೆದ ಒಂದು ದಶಕದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿರುವುದೇ ಜನನ ಪ್ರಮಾಣ ಕುಸಿತಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2016ರಲ್ಲಿ ಸುಮಾರು 26 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುತ್ತಿತ್ತು. 2026ರ ವೇಳೆಗೆ ಈ ಸಂಖ್ಯೆ 19.80 ಲಕ್ಷ (19,80,224)ಕ್ಕೆ ಇಳಿದಿದ್ದು, ಕಳೆದ 10 ವರ್ಷಗಳಲ್ಲಿ ಸುಮಾರು 6.2 ಲಕ್ಷ ಮಕ್ಕಳ ಇಳಿಕೆ ದಾಖಲಾಗಿದೆ.


ಲಸಿಕಾ ಅಭಿಯಾನದಲ್ಲೂ ಬದಲಾವಣೆ

ಪ್ರತಿ ವರ್ಷ ನಡೆಯುವ ಪಲ್ಸ್ ಪೋಲಿಯೊ ಅಭಿಯಾನದಲ್ಲಿ ಅರ್ಹ ಮಕ್ಕಳಲ್ಲಿ ಶೇ.88ರಿಂದ 96ರಷ್ಟು ಮಕ್ಕಳು ಮೊದಲ ದಿನವೇ ಲಸಿಕೆ ಪಡೆಯುತ್ತಾರೆ. ಉಳಿದ ಮಕ್ಕಳಿಗೆ ನಂತರ ಆರೋಗ್ಯ ಸಿಬ್ಬಂದಿ ಮನೆಮನೆಗೆ ತೆರಳಿ ಲಸಿಕೆ ನೀಡುತ್ತಾರೆ. ಈಗ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಲಸಿಕಾ ಅಭಿಯಾನದ ವ್ಯಾಪ್ತಿಯೂ ಇಳಿದಿದೆ. ಈ ಹಿಂದೆ ಹೆಚ್ಚಿನ ಸಂಖ್ಯೆಯ ಲಸಿಕಾ ಕೇಂದ್ರಗಳು ಮತ್ತು ಸಿಬ್ಬಂದಿ ಅಗತ್ಯವಿದ್ದರೆ, ಈಗ ಕಡಿಮೆ ಮಕ್ಕಳಿಗೆ ಸೇವೆ ಒದಗಿಸಲು ತುಲನಾತ್ಮಕವಾಗಿ ಕಡಿಮೆ ಸಂಪನ್ಮೂಲಗಳು ಸಾಕಾಗುತ್ತಿವೆ. ಇದರಿಂದ ಸರ್ಕಾರದ ಕಾರ್ಯಾಚರಣೆಯ ವೆಚ್ಚ ಮತ್ತು ಮಾನವ ಸಂಪನ್ಮೂಲ ಬಳಕೆಯಲ್ಲೂ ಬದಲಾವಣೆ ಕಂಡುಬರುತ್ತಿದೆ.


ವರ್ಷವಾರು ಪೋಲಿಯೊ ಲಸಿಕೆಗೆ ಅರ್ಹ ಮಕ್ಕಳ ಸಂಖ್ಯೆ ಹೀಗಿದೆ…

2016ರಲ್ಲಿ 26 ಲಕ್ಷ, 2017ರಲ್ಲಿ 26.16 ಲಕ್ಷ, 2018 ರಲ್ಲಿ 24.50 ಲಕ್ಷ, 2019ರಲ್ಲಿ 24.50 ಲಕ್ಷ, 2020ರಲ್ಲಿ 24.50 ಲಕ್ಷ, 2021ರಲ್ಲಿ 24.49 ಲಕ್ಷ, 2022ರಲ್ಲಿ 24.36 ಲಕ್ಷ, 2023ರಲ್ಲಿ 19.80 ಲಕ್ಷ, 2024ರಲ್ಲಿ 21.00 ಲಕ್ಷ, 2025ರಲ್ಲಿ 21.11 ಲಕ್ಷ ಪೋಲಿಯೊ ಲಸಿಕೆಗೆ ಅರ್ಹ ಮಕ್ಕಳ ಸಂಖ್ಯೆ ಇದ್ದಾರೆ 2026ರಲ್ಲಿ 19.80 ಲಕ್ಷ ಪೋಲಿಯೊ ಲಸಿಕೆ ಆರೋಗ್ಯ ಇಲಾಖೆಯ ಗುರಿಯಾಗಿದೆ.

ಇದನ್ನೂ ಓದಿ:


ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರೂ, ಪ್ರತಿ ಅರ್ಹ ಮಗುವಿಗೂ ಪೋಲಿಯೊ ಹನಿ ತಲುಪಿಸುವ ಗುರಿಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿರುವ ಸ್ಥಾನಮಾನವನ್ನು ಮುಂದುವರಿಸಲು ಪ್ರತಿಯೊಬ್ಬ ಮಗುವಿಗೂ ಲಸಿಕೆ ನೀಡುವುದು ಅತ್ಯಂತ ಅಗತ್ಯ ಎಂದು ಆರೋಗ್ಯ ಇಲಾಖೆ ಪೋಷಕರಿಗೆ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !