ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಾದಕ ವಸ್ತುಗಳ ಮಾರಾಟ ಹಾಗೂ ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದನ್ನು ತಡೆಯಲು ಪೊಲೀಸ್ ಇಲಾಖೆ ತಕ್ಷಣ ಮತ್ತು ನಿರಂತರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ಒಕ್ಕೂಟದ ವತಿಯಿಂದ ಜುಲೈ 28 ರಂದು ಬೆಳಿಗ್ಗೆ 9 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯ ಮಾರ್ಗ ಮತ್ತು ಕಾರ್ಯಕ್ರಮ
ಈ ಬೃಹತ್ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಡಾ. ಬಾಬಾಸಾಹೇಬ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ಅಭಾಜಿ ವೃತ್ತದವರೆಗೆ ಸಾಗಲಿದೆ. ಮೆರವಣಿಗೆಯ ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ (ಸಿಪಿಐ) ಅವರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.
ಪ್ರತಿಭಟನೆಗೆ ಪ್ರಮುಖ ಕಾರಣ
ರಾಯಬಾಗ ತಾಲ್ಲೂಕಿನಲ್ಲಿ ಮಾದಕ ವಸ್ತುಗಳ ಜಾಲವು ಬಲವಾಗಿ ಬೇರೂರುತ್ತಿದ್ದು, ಇದು ಯುವಕರ ಜೀವನದ ಮೇಲೆ ತೀವ್ರವಾದ ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ಸ್ಥಳೀಯ ಕುಟುಂಬಗಳಲ್ಲಿ ಆತಂಕ ಮತ್ತು ಕಳವಳ ಹೆಚ್ಚಾಗಿದ್ದು, ಇದಕ್ಕೆ ತಕ್ಷಣವೇ ತಿಲಾಂಜಲಿ ಹಾಡಬೇಕೆಂಬ ಉದ್ದೇಶದಿಂದ ಈ ಪ್ರತಿಭಟನೆಯನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು
ವಿಶೇಷಗಸ್ತು ಪಡೆ: ಮಾದಕ ವಸ್ತು ನಿಗ್ರಹಕ್ಕೆ ತಾಲ್ಲೂಕಿನಲ್ಲಿ ಪ್ರತ್ಯೇಕ ವಿರೋಧಿ ಗಸ್ತು ತಂಡಗಳನ್ನು ನಿಯೋಜಿಸಬೇಕು.
ಕಠಿಣ ಕಾನೂನು ಕ್ರಮ: ಮಾದಕ ವಸ್ತು ಮಾರಾಟಗಾರರನ್ನು ತಕ್ಷಣ ಪತ್ತೆಹಚ್ಚಿ ಅವರ ವಿರುದ್ಧ ಎಫ್.ಐ.ಆರ್. ದಾಖಲಿಸಬೇಕು.
ವ್ಯಸನಮುಕ್ತ ಕೇಂದ್ರ ಸ್ಥಾಪನೆ: ಸ್ಥಳೀಯವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪುನರ್ವಸತಿ ಮತ್ತು ವ್ಯಸನಮುಕ್ತ ಕೇಂದ್ರವನ್ನು ಸ್ಥಾಪಿಸಬೇಕು.
ಆಯೋಜಕರ ಮುಖ್ಯ ಸ್ಪಷ್ಟನೆ “ನಮ್ಮ ಹೋರಾಟ ಮತ್ತು ಬೇಡಿಕೆಗಳು ಮಾದಕ ವಸ್ತುಗಳನ್ನು ಪೂರೈಸುವ ಜಾಲ, ಮಾರಾಟಗಾರರು ಮತ್ತು ಸರಬರಾಜುದಾರರ ವಿರುದ್ಧವೇ ಹೊರತು, ದಾಸರಾದ ವ್ಯಸನಿಗಳ ವಿರುದ್ಧವಲ್ಲ. ಮಾದಕ ವ್ಯಸನಿಗಳಿಗೆ ಶಿಕ್ಷೆಯ ಬದಲು ಮಾನವೀಯ ನೆಲೆಯಲ್ಲಿ ಚಿಕಿತ್ಸೆ, ಪುನರ್ವಸತಿ ಹಾಗೂ ಮನವೋಲಿಕೆಯ ಬೆಂಬಲ ಸಿಗಬೇಕು” ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.
ಒಗ್ಗೂಡಿದ ನೂರಾರು ಸಂಘಟನೆಗಳು
ಈ ಹೋರಾಟಕ್ಕೆ ತಾಲ್ಲೂಕಿನ ಪ್ರಮುಖ ಸಾಮಾಜಿಕ, ಧಾರ್ಮಿಕ, ವೃತ್ತಿಪರ ಹಾಗೂ ಪ್ರಾದೇಶಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಜಂಟಿಯಾಗಿ ಭಾಗವಹಿಸುತ್ತಿವೆ.
ಸಾಮಾಜಿಕ ಹಾಗೂ ವೃತ್ತಿಪರ ಸಂಘಟನೆಗಳು:
ಅಭಾಜಿ ಫೌಂಡೇಶನ್, ರಾಯಬಾಗ ವಕೀಲರ ಸಂಘ, ಮೆಡಿಕಲ್ ಅಸೋಸಿಯೇಶನ್, ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘ, ಡ್ರೈವರ್ಸ್ ಅಸೋಸಿಯೇಶನ್, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಘ, ಎ.ಸಿ.ಹೆಚ್.ಆರ್. (ಗಣೇಶ ಕಾಂಬಳೆ).
ದಲಿತ ಹಾಗೂ ಶೋಷಿತ ವರ್ಗಗಳ ಒಕ್ಕೂಟ:
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅನೀಲ ಮೋಹಿತೆ), ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಭೀಮವಾದ.
ಧಾರ್ಮಿಕ ಹಾಗೂ ಸಾಂಸ್ಕೃತಿಕ
ಶ್ರೀರಾಮ ಸೇನಾ ಕರ್ನಾಟಕ, ಭಜರಂಗದಳ ರಾಯಬಾಗ, ಶ್ರೀರಾಮ ಹಿಂದೂಸ್ತಾನ, ಹಿಂದೂ ಗೋಂಧಳಿ ಸಮಾಜ, ಖಬ್ರಸ್ಥಾನ ಕಮೀಟಿ (ಸುನ್ನಿ), ಟಿಪ್ಪು ಕ್ರಾಂತಿ ಸೇನೆ ಕರ್ನಾಟಕ, ಕರ್ನಾಟಕ ಪ್ರದೇಶ ಕುರುಬರ ಸಂಘ, ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಪರಿಶಿಷ್ಟ ಪಂಗಡ ಸಮಾಜ ಸೇವಾ ಸಂಘ.
ಇದನ್ನೂ ಓದಿ:
ಕನ್ನಡಪರ ಸಂಘಟನೆಗಳು
ಕರ್ನಾಟಕ ರಕ್ಷಣಾ ವೇದಿಕೆ ರಾಯಬಾಗ (ನಾರಾಯಣಗೌಡ ಬಣ), ಕರ್ನಾಟಕ ಯುವ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ), ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ), ಕನ್ನಡಾಂಬೆ ಕರ್ನಾಟಕ ರಕ್ಷಣಾ ವೇದಿಕೆ.
ತಾಲ್ಲೂಕಿನ ಭವಿಷ್ಯ ಹಾಗೂ ಯುವಜನತೆಯ ಹಿತದೃಷ್ಟಿಯಿಂದ ಸಾರ್ವಜನಿಕರು ಹಾಗೂ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.



