ಹೊಸದಿಗಂತ ವರದಿ ಕಲಬುರಗಿ:
ಬರದ ಛಾಯೆ ಆವರಿಸಿರುವ ಕಲಬುರಗಿ ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದ ಜನ ಮತ್ತು ಜಾನುವಾರುಗಳ ಕುಡಿಯುವ ನೀರು ಪೂರೈಕೆಗೆ ನಾರಾಯಣಪುರ ಜಲಾಶಯದಿಂದ 4.105 ಟಿ.ಎಂ.ಸಿ. ನೀರು ಹರಿಸಲು ಪ್ರಾದೇಶಿಕ ಆಯುಕ್ತರು ಅನುಮೋದನೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆ, ಕಲಬುರಗಿ ಮಹಾನಗರ ಪಾಲಿಕೆ, ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ, ಪುರಸಭೆ ಅಫಜಲಪುರ ಹಾಗೂ ತಹಸೀಲ್ದಾರರು ಯಡ್ರಾಮಿ ಮತ್ತು ಜೇವರ್ಗಿ ಅವರ ಬೇಡಿಕೆಯಂತೆ ಆಯಾ ಪ್ರದೇಶದ ವ್ಯಾಪ್ತಿಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರು ಮತ್ತು ಜಾನುವಾರುಗಳಿಗೆ ಅಗತ್ಯವಿರುವ ಕುಡಿಯುವ ನೀರಿನ ಅವಶ್ಯಕತೆಯನ್ನು ಪರಿಗಣಿಸಿ ನೀರು ಬಿಡುಗಡೆ ಸಲ್ಲಿಸಿದ ಪ್ರಸ್ತಾವನೆಗೆ ಪ್ರಾದೇಶಿಕ ಆಯುಕ್ತರು ಅನುಮೋದನೆ ನೀಡಿದ್ದರಿಂದ ನೀರು ಈಗಾಗಲೆ ಹರಿಬಿಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:
ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚಾಗಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಕ್ಕೆ ಒಳ ಮತ್ತು ಹೊರ ಹರಿವು ಹೆಚ್ಚಿದ್ದರಿಂದ 4.105 ಟಿ.ಎಂ.ಸಿ. ನೀರು ಜಿಲ್ಲೆಗೆ ಹರಿಬಿಡಲಾಗಿದೆ.
ನಾರಾಯಣಪುರ ಜಲಾಶಯದ ಐ.ಬಿ.ಸಿ. ಹಾಗೂ ಜೆ.ಬಿ.ಸಿ. ಕಾಲುವೆಗಳ ಮೂಲಕ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ 1.0 ಟಿ.ಎಂ.ಸಿ., ಘತ್ತರಗಾ ಬ್ಯಾರೇಜಿಗೆ 1.0 ಟಿ.ಎಂ.ಸಿ., ಕಲ್ಲೂರು ಬ್ಯಾರೇಜಿಗೆ 1.0 ಟಿ.ಎಂ.ಸಿ., ಸರಡಗಿ ಬ್ಯಾರೇಜಿಗೆ 0.80 ಟಿ.ಎಂ.ಸಿ. ಹಾಗೂ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಗ್ರಾಮಗಳಿಗೆ ಸಣ್ಣ ನೀರಾವರಿ ಇಲಾಖೆ ಅಧೀನದ ಕೆರೆಗಳಿಗೆ 0.305 ಟಿ.ಎಂ.ಸಿ. ಸೇರಿ ಒಟ್ಟು 4.105 ಟಿ.ಎಂ.ಸಿ. ನೀರನ್ನು ಹರಿಬಿಡಲಾಗುತ್ತಿದ್ದು, ಸದರಿ ನೀರನ್ನು ಸಂಬಂಧಪಟ್ಟ ಇಲಾಖೆಗಳು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತೆ ಹಾಗೂ ನೀರಿನ ಸದ್ಬಳಕೆ ಮತ್ತು ಸಮರ್ಪಕ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಡಿ.ಸಿ. ಸೂಚನೆ ನೀಡಿದ್ದಾರೆ.



