ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿಗರು ಮಳೆಗಾಲವನ್ನೇ ಮರೆತು ಹೋಗಿದ್ದಾರೆ. ಜೂನ್ ಎಂದರೆ ಮಳೆಗಾಲದ ಆರಂಭ, ಆಗಸ್ಟ್‌ನಲ್ಲಿ ಎಡೆಬಿಡದ ಮಳೆ ಅನ್ನೋದು ವಾಡಿಕೆ. ಆದರೆ ಇದೀಗ ಆಗಸ್ಟ್ ಆರಂಭವಾದರೂ ಮಳೆ ಅನ್ನೋದನ್ನೇ ಜನ ನೋಡಿಲ್ಲ.
ಮೇ ತಿಂಗಳ ಪೂರ್ವ ಮುಂಗಾರು ಮಳೆಯಲ್ಲಿ ಉತ್ತಮ ಪ್ರಮಾಣದ ಮಳೆ ದಾಖಲಾಗಿದ್ದರೂ, ಜುಲೈ ತಿಂಗಳಲ್ಲಿ ಮಳೆರಾಯ ಸಂಪೂರ್ಣ ಕೈಕೊಟ್ಟಿದ್ದಾನೆ. ಪರಿಣಾಮವಾಗಿ, ಕಳೆದ 108 ವರ್ಷಗಳ ಇತಿಹಾಸದಲ್ಲೇ ಬೆಂಗಳೂರು ಅತ್ಯಂತ ಕಡಿಮೆ ಮಳೆ ಕಂಡ ಎರಡನೇ ಒಣ ಜುಲೈ ತಿಂಗಳಿಗೆ ಸಾಕ್ಷಿಯಾಗಿದೆ.
ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ, ಜುಲೈ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಕೇವಲ 23 ಮಿಮೀ ಮಳೆ ಮಾತ್ರ ದಾಖಲಾಗಿದೆ. 1918ರ ಜುಲೈನಲ್ಲಿ ನಗರದಲ್ಲಿ 18.5 ಮಿಮೀ ಅತ್ಯಂತ ಕಡಿಮೆ ಮಳೆ ದಾಖಲಾಗಿತ್ತು. ಅದಾದ ಬಳಿಕ ಅತಿ ಕಡಿಮೆ ಮಳೆ ಬಿದ್ದ ಜುಲೈ ತಿಂಗಳು ಎಂದರೆ ಇದೇ ಆಗಿದೆ.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ಸರಾಸರಿ 80 ಮಿಮೀ ನಿಂದ 100 ಮಿಮೀ ವರೆಗೆ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಕೇವಲ 23 ಮಿಮೀ ಮಳೆಯಾಗುವ ಮೂಲಕ ಶೇಕಡಾ 70 ಕ್ಕಿಂತಲೂ ಹೆಚ್ಚು ಮಳೆ ಕೊರತೆ ಉಂಟಾಗಿದೆ. ಜುಲೈ ಆರಂಭದ ವೇಳೆಗೆ ಮುಂಗಾರು ಮಳೆಯ ಒಟ್ಟು ಪ್ರಮಾಣ 70 ಮಿಮೀ ಇತ್ತು, ತಿಂಗಳ ಅಂತ್ಯಕ್ಕೆ ಇದು ಕೇವಲ 94 ಮಿಮೀ ಗೆ ತಲುಪಿದೆ.
ಮಳೆ ಅಭಾವದಿಂದ ಈ ಬಾರಿ ಬಿಸಿಲಿನ ತೀವ್ರತೆಯೂ ಹೆಚ್ಚಾಗಿದ್ದು, ಜನ ಹೀಟ್ ವೇವ್‌ನಿಂದ ಹೈರಾಣಾಗಿದ್ದರು.ಇತ್ತೀಚೆಗೆ ಪಶ್ಚಿಮ ಕರಾವಳಿಯಲ್ಲಿ ಸೃಷ್ಟಿಯಾದ ಕರಾವಳಿ ಸುಳಿ ಗಾಳಿಯ ಪ್ರಭಾವದಿಂದಾಗಿ ಹಗುರ ಮಳೆಯಾಗಿದೆ. ಆದರೆ, ಈ ಮಳೆಯು ತಾತ್ಕಾಲಿಕವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತೆ ಮಳೆಯ ಅಭಾವ ಎದುರಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.



