August 5, 2026
Wednesday, August 5, 2026
spot_img

‘ದಳಪತಿ ಸರ್ಕಾರದ ಮೆಗಾ ಬಜೆಟ್’: ಶಿಕ್ಷಣ ಇಲಾಖೆಗೆ ಭರ್ಜರಿ ಅನುದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಸರ್ಕಾರ 2026-27ನೇ ಹಣಕಾಸು ವರ್ಷದ ಪರಿಷ್ಕೃತ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಮೂಲಸೌಕರ್ಯ ಮತ್ತು ಕೃಷಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಘೋಷಿಸಿದೆ.

ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬಜೆಟ್ ಮಂಡಿಸಿ ವಿವಿಧ ಇಲಾಖೆಗಳ ಪರಿಷ್ಕೃತ ಅನುದಾನದ ವಿವರಗಳನ್ನು ಪ್ರಕಟಿಸಿದರು.

ಶಿಕ್ಷಣ ಇಲಾಖೆಗೆ ಅತಿ ದೊಡ್ಡ ಅನುದಾನ

ರಾಜ್ಯದ ಅಭಿವೃದ್ಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಸರ್ಕಾರ, ಶಾಲಾ ಶಿಕ್ಷಣ ಇಲಾಖೆಗೆ 44,527 ಕೋಟಿ ರೂ. ಮೀಸಲಿಟ್ಟಿದೆ. ಇದು ಎಲ್ಲಾ ಇಲಾಖೆಗಳ ಪೈಕಿ ಅತಿ ದೊಡ್ಡ ಅನುದಾನವಾಗಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು, ಶಾಲಾ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಅನುದಾನವನ್ನು ಬಳಸಲಾಗುತ್ತದೆ.

ಗ್ರಾಮೀಣಾಭಿವೃದ್ಧಿಗೆ ಭಾರೀ ಮೊತ್ತ

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 39,609 ಕೋಟಿ ರೂ. ಮೀಸಲಿಡಲಾಗಿದೆ. ಗ್ರಾಮೀಣ ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ಉದ್ಯೋಗ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆ ಬಲಪಡಿಸುವ ಯೋಜನೆಗಳಿಗೆ ಈ ಅನುದಾನ ನೆರವಾಗಲಿದೆ.

ಆರೋಗ್ಯ, ನೀರು ಮತ್ತು ಮೂಲಸೌಕರ್ಯಕ್ಕೆ ಆದ್ಯತೆ

ನಗರಾಡಳಿತ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಗೆ 29,863 ಕೋಟಿ ರೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 23,357 ಕೋಟಿ ರೂ ಅನುದಾನ ಘೋಷಿಸಲಾಗಿದೆ. ರಸ್ತೆ ಮತ್ತು ಬಂದರು ಅಭಿವೃದ್ಧಿಗಾಗಿ ಹೆದ್ದಾರಿ ಹಾಗೂ ಸಣ್ಣ ಬಂದರು ಇಲಾಖೆಗೆ 21,524 ಕೋಟಿ ರೂ, ಇಂಧನ ಇಲಾಖೆಗೆ 15,828 ಕೋಟಿ ರೂ ಮೀಸಲಿಡಲಾಗಿದೆ.

ಇದನ್ನೂ ಓದಿ:

ಕೃಷಿ, ಸಾರಿಗೆ ಮತ್ತು ಗೃಹ ಇಲಾಖೆಗೆ ಅನುದಾನ

ಗೃಹ, ಮದ್ಯನಿಷೇಧ ಹಾಗೂ ಅಬಕಾರಿ ಇಲಾಖೆಗೆ 17,290 ಕೋಟಿ ರೂ, ವಿಶೇಷ ಕಾರ್ಯಕ್ರಮಗಳ ಅನುಷ್ಠಾನಕ್ಕೆ 17,150 ಕೋಟಿ ರೂ ನೀಡಲಾಗಿದೆ. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಗೆ 14,984 ಕೋಟಿ ರೂ, ಆಹಾರ ಮತ್ತು ಗ್ರಾಹಕ ವ್ಯವಹಾರ ಇಲಾಖೆಗೆ 14,830 ಕೋಟಿ ರೂ, ಸಾರಿಗೆ ಇಲಾಖೆಗೆ 13,561 ಕೋಟಿ ರೂ ಅನುದಾನ ಘೋಷಿಸಲಾಗಿದೆ.

ಸಾಮಾಜಿಕ ಕಲ್ಯಾಣಕ್ಕೂ ವಿಶೇಷ ಒತ್ತು

ಸಾಮಾಜಿಕ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಇಲಾಖೆಗೆ 9,818 ಕೋಟಿ ರೂ, ಜಲಸಂಪನ್ಮೂಲ ಇಲಾಖೆಗೆ 9,264 ಕೋಟಿ ರೂ, ವಸತಿ ಮತ್ತು ನಗರಾಭಿವೃದ್ಧಿಗೆ 8,852 ಕೋಟಿ ರೂ, ಉನ್ನತ ಶಿಕ್ಷಣ ಇಲಾಖೆಗೆ 8,393 ಕೋಟಿ ರೂ ಹಾಗೂ ಸಹಕಾರ ಇಲಾಖೆಗೆ 8,028 ಕೋಟಿ ರೂ ಅನುದಾನ ಮೀಸಲಿಡಲಾಗಿದೆ.

ತಮಿಳುನಾಡು ಸರ್ಕಾರದ ಈ ಪರಿಷ್ಕೃತ ಬಜೆಟ್‌ನಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಸ್ಪಷ್ಟವಾಗಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಯತ್ತ ಸರ್ಕಾರ ಗಮನ ಹರಿಸಿರುವುದನ್ನು ಬಜೆಟ್ ಹಂಚಿಕೆಗಳು ಸೂಚಿಸುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !