ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಪೆಂಟಗನ್ ತನ್ನ ಬಳಿಯಿರುವ ‘ಇನ್ನೂ ಖಚಿತವಾಗಿ ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳ’ (UFO/UAP) ಮತ್ತಷ್ಟು ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದೆ.
ಹೊಸದಾಗಿ ಬಿಡುಗಡೆ ಮಾಡಿರುವ ಒಟ್ಟು 41 ಡಿಕ್ಲಾಸಿಫೈಡ್ ದಾಖಲೆಗಳಲ್ಲಿ ಹಲವು ದಶಕಗಳ ಹಿಂದಿನ UFO ವರದಿಗಳಿಂದ ಹಿಡಿದು ಇತ್ತೀಚಿನ ವರ್ಷಗಳ ಮಿಲಿಟರಿ ಮತ್ತು ಗುಪ್ತಚರ ದಾಖಲೆಗಳವರೆಗಿನ ನಿಗೂಢ ಚಲನೆಗಳ ಮಾಹಿತಿಗಳು ಸೇರಿವೆ. ಇದು 2026ರಲ್ಲಿ ಬಹಿರಂಗಗೊಳಿಸುತ್ತಿರುವ ಐದನೇ ಸರಣಿಯಾಗಿದೆ.
ಇಲ್ಲಿ ಈ ದಾಖಲೆಗಳು ಅನ್ಯಗ್ರಹ ಜೀವಿಗಳ ಅಸ್ತಿತ್ವವನ್ನು ದೃಢಪಡಿಸಿಲ್ಲ. ದಾಖಲೆಗಳಲ್ಲಿ ಉಲ್ಲೇಖವಾಗಿರುವ ವಸ್ತುಗಳು ಅಥವಾ ಘಟನೆಗಳನ್ನು UAP (Unidentified Anomalous Phenomena), ಅಂದರೆ ಇನ್ನೂ ಖಚಿತವಾಗಿ ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳು ಎಂದು ದಾಖಲಿಸಲಾಗಿದೆ. ಕೆಲವು ಪ್ರಕರಣಗಳಿಗೆ ವಿವರಣೆ ಸಿಕ್ಕಿದ್ದರೆ, ಕೆಲವು ಇನ್ನೂ ಬಗೆಹರಿಯದ ಪ್ರಕರಣಗಳಾಗಿವೆ.

1950ರಿಂದ 2026ರವರೆಗೆ ದಾಖಲೆ
ಹೊಸದಾಗಿ ಬಿಡುಗಡೆಯಾದ ಕಡತಗಳು ಹೆಚ್ಚು ಕುತೂಹಲ ಮುಡಿಸುವಂತಿದೆ. ಇವುಗಳಲ್ಲಿ 1950ರ ದಶಕದ ಘಟನೆಗಳಿಂದ 2026ರವರೆಗಿನ ವರದಿ, ಪೆಂಟಗನ್ ಮಾತ್ರವಲ್ಲದೆ FBI, CIA, ಅಮೆರಿಕದ ವಿದೇಶಾಂಗ ಇಲಾಖೆ ಮತ್ತು ಅಧ್ಯಕ್ಷರ ಕಾರ್ಯಾಲಯಕ್ಕೆ ಸಂಬಂಧಿಸಿದ ದಾಖಲೆಗಳೂ ಒಳಗೊಂಡಿವೆ. ಈ ಮೂಲಕ ಹಲವು ದಶಕಗಳಿಂದ ಸರ್ಕಾರಿ ಕಡತಗಳಲ್ಲಿ ಉಳಿದಿದ್ದ UFO/UAP ವರದಿಗಳ ಒಂದು ಭಾಗ ಈಗ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.
ಅಫ್ಘಾನಿಸ್ತಾನದ ಆಕಾಶದಲ್ಲಿ ತ್ರಿಕೋನ!
ಹೊಸ ದಾಖಲೆಗಳಲ್ಲಿ ಗಮನ ಸೆಳೆದಿರುವ ಪ್ರಕರಣವೊಂದು 2002ರಲ್ಲಿ ಅಫ್ಘಾನಿಸ್ತಾನದ ಬಾಗ್ರಾಮ್ ಏರ್‌ಫೀಲ್ಡ್ ಬಳಿ ನಡೆದಿದ್ದಾಗಿ ವರದಿಯಾಗಿದೆ. ಮಾಜಿ ಮಿಲಿಟರಿ ಪೈಲಟ್ ಒಬ್ಬರು ಆಕಾಶದಲ್ಲಿ ಅತ್ಯಂತ ದೊಡ್ಡ, ಮೌನವಾಗಿದ್ದ ತ್ರಿಕೋನಾಕಾರದ ವಸ್ತುವನ್ನು ಕಂಡಿರುವುದಾಗಿ ವಿವರಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ, ವಸ್ತುವಿನ ಗಾತ್ರ ಸುಮಾರು 500 ಅಡಿ ಇರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಈ ವಸ್ತು ಏನು ಎಂಬುದಕ್ಕೆ ದಾಖಲೆಗಳು ಅಂತಿಮ ಉತ್ತರ ನೀಡಿಲ್ಲ.
ಗಲ್ಫ್ ಆಫ್ ಓಮನ್‌ನಲ್ಲಿ ‘ಕೋಲ್ಡ್ ಆರ್ಬ್’
ಮತ್ತೊಂದು ಕುತೂಹಲಕಾರಿ ಪ್ರಕರಣ 2021ರಲ್ಲಿ ಗಲ್ಫ್ ಆಫ್ ಓಮನ್ ಪ್ರದೇಶದಲ್ಲಿ ದಾಖಲಾಗಿದೆ. ಅಮೆರಿಕದ AC-130J ಯುದ್ಧವಿಮಾನದಿಂದ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ, ಸುಮಾರು ನಾಲ್ಕು ಅಡಿ ವ್ಯಾಸದ ಗೋಳಾಕಾರದ ವಸ್ತು ಕಾಣಿಸಿಕೊಂಡಿದೆ ಎಂದು ದಾಖಲೆಗಳಲ್ಲಿ ವಿವರಿಸಲಾಗಿದೆ. ಇದನ್ನು ‘ಕೋಲ್ಡ್ ಆರ್ಬ್’ ಎಂದು ಉಲ್ಲೇಖಿಸಲಾಗಿದೆ. ಮಿಲಿಟರಿ ಗುಂಡಿನ ದಾಳಿಯ ಸಂದರ್ಭದಲ್ಲಿ ಆ ವಸ್ತುವಿನ ಚಲನವಲನದಲ್ಲಿ ಬದಲಾವಣೆ ಕಂಡುಬಂದಿದೆ ಎಂಬ ವಿವರಣೆಯೂ ದಾಖಲೆಗಳಲ್ಲಿದೆ. ಇದರ ಸ್ವರೂಪ ಅಥವಾ ಮೂಲದ ಬಗ್ಗೆ ದಾಖಲೆಗಳು ಖಚಿತ ನಿರ್ಣಯಕ್ಕೆ ಬಂದಿಲ್ಲ.
ವಿಮಾನ ಪ್ರಯಾಣದ ವೇಳೆ ನಿಗೂಢ ಬೆಳಕು
ಹೊಸ ಕಡತಗಳಲ್ಲಿ ಮಾಜಿ ಮಿಲಿಟರಿ ಪೈಲಟ್ ಒಬ್ಬರು ಬೋಸ್ಟನ್‌ನಿಂದ ಡಬ್ಲಿನ್‌ಗೆ ಸಾಗುವ ವಿಮಾನಯಾನ ಸಂದರ್ಭದಲ್ಲಿ ಹಲವು ಬಾರಿ ಅಸಾಮಾನ್ಯ ಬಿಳಿ ಬೆಳಕುಗಳನ್ನು ಗಮನಿಸಿದ್ದಾಗಿ ನೀಡಿರುವ ಹೇಳಿಕೆಯೂ ಇದೆ. ಈ ಘಟನೆಗಳಿಗೆ ಸಂಬಂಧಿಸಿದಂತೆ FBI ದಾಖಲೆಗಳಲ್ಲಿ ಹೇಳಿಕೆಗಳು ಮತ್ತು ವಿಚಾರಣೆಯ ವಿವರಗಳು ಸೇರಿವೆ.
1963ರ ಬ್ರೆಜಿಲ್ ಪ್ರಕರಣವೂ ಕಡತದಲ್ಲಿದೆ
ಹೊಸ ದಾಖಲೆಗಳಲ್ಲಿ ಅತ್ಯಂತ ಹಳೆಯ ಹಾಗೂ ವಿಚಿತ್ರ ಪ್ರಕರಣಗಳಲ್ಲಿ ಒಂದಾಗಿ 1963ರ ಬ್ರೆಜಿಲ್ ಘಟನೆ ಕೂಡ ಕಾಣಿಸಿಕೊಂಡಿದೆ. ಲೋಹದ ಗೋಳಾಕಾರದ ವಸ್ತುವೊಂದು ಪತನಗೊಂಡಿದ್ದು, ಅದರೊಳಗೆ ಮಾನವನಂತಿರುವ ದೇಹವಿತ್ತು ಎಂಬ ಹೇಳಿಕೆ ದಾಖಲಾಗಿತ್ತು.
ಹೊಸ ಬಿಡುಗಡೆ ಕೇವಲ UFO ಚಿತ್ರಗಳ ಸಂಗ್ರಹವಲ್ಲ. ಅದರಲ್ಲಿ ವಿಡಿಯೊಗಳು, ಥರ್ಮಲ್ ಮತ್ತು ಇನ್ಫ್ರಾರೆಡ್ ದೃಶ್ಯಗಳು, ಗುಪ್ತಚರ ವರದಿಗಳು, ಸಂದರ್ಶನಗಳ ದಾಖಲೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಸೇರಿವೆ. ಇವುಗಳನ್ನು ಸಾರ್ವಜನಿಕಗೊಳಿಸುವ ಉದ್ದೇಶ UFO/UAP ಕುರಿತ ಸರ್ಕಾರಿ ದಾಖಲೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಈ ದಾಖಲೆಗಳಿಗಾಗಿ ಅಮೆರಿಕ ಸರ್ಕಾರ ಪ್ರತ್ಯೇಕ ಸಾರ್ವಜನಿಕ ಡೇಟಾಬೇಸ್ ಕೂಡ ನಿರ್ವಹಿಸುತ್ತಿದೆ.
ಇದನ್ನೂ ಓದಿ:
ಏಕೆ ಈಗ ದಾಖಲೆಗಳು ಹೊರಬರುತ್ತಿವೆ?
2026ರಲ್ಲಿ ಅಮೆರಿಕ ಆಡಳಿತದ ನಿರ್ದೇಶನದ ನಂತರ UAP/UFOಗೆ ಸಂಬಂಧಿಸಿದ ಸರ್ಕಾರಿ ದಾಖಲೆಗಳನ್ನು ಹಂತ ಹಂತವಾಗಿ ಡಿಕ್ಲಾಸಿಫೈ ಮಾಡಿ ಸಾರ್ವಜನಿಕಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆಯ ಭಾಗವಾಗಿ ಮೇ 2026ರಿಂದ ಹಲವು ಹಂತಗಳಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ. ಜುಲೈ 10ರಂದು ನಡೆದ ಹಿಂದಿನ ಹಂತದಲ್ಲಿ 40 ಕಡತಗಳು, 14 ದಾಖಲೆಗಳು, 19 ವಿಡಿಯೊಗಳು, 4 ಆಡಿಯೊ ಮತ್ತು 3 ಚಿತ್ರಗಳು ಬಿಡುಗಡೆಯಾಗಿದ್ದವು. ಈಗ ಬಿಡುಗಡೆಯಾಗಿರುವ 41 ಹೊಸ ದಾಖಲೆಗಳು ಆ ಸರಣಿಯ ಮುಂದುವರಿದ ಭಾಗವಾಗಿದೆ. ಇನ್ನಷ್ಟು ದಾಖಲೆಗಳು ಹಂತ ಹಂತವಾಗಿ ಬಿಡುಗಡೆಯಾಗುವ ನಿರೀಕ್ಷೆಯಿರುವುದರಿಂದ, ಮುಂದಿನ ಕಡತಗಳಲ್ಲಿ ಇನ್ನಷ್ಟು ಹಳೆಯ ಪ್ರಕರಣಗಳಿಗೆ ಬೆಳಕು ಬೀಳುತ್ತದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.



