August 14, 2026
Friday, August 14, 2026
spot_img

ಸಲೀಂ ಅಹ್ಮದ್‌ಗೆ ವಿಧಾನ ಪರಿಷತ್ ಸಭಾಪತಿ ಪಟ್ಟ: ಚುನಾವಣೆಯಲ್ಲಿ ಪಿ.ಎಚ್. ಪೂಜಾರ್ ವಿರುದ್ಧ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಇಂದು ಹೊಸ ಆಯ್ಕೆ ನಡೆದಿದೆ. ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದ ಎರಡನೇ ದಿನವಾದ ಶುಕ್ರವಾರ ನಡೆದ ವಿಧಾನ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಲೀಂ ಅಹ್ಮದ್ ಅವರು ಗೆಲುವು ಸಾಧಿಸಿದ್ದಾರೆ.

ಸಲೀಂ ಅಹ್ಮದ್‌ಗೆ 38 ಮತ

ಸಭಾಪತಿ ಆಯ್ಕೆಗಾಗಿ ನಡೆದ ಧ್ವನಿಮತ ಪ್ರಕ್ರಿಯೆಯಲ್ಲಿ ಸಲೀಂ ಅಹ್ಮದ್ ಪರವಾಗಿ 38 ಮತಗಳು ಬಂದರೆ, ಬಿಜೆಪಿ ಅಭ್ಯರ್ಥಿ ಪಿ.ಎಚ್. ಪೂಜಾರ್ ಅವರಿಗೆ 30 ಮತಗಳು ಲಭಿಸಿದವು. ಹೀಗಾಗಿ ಸಲೀಂ ಅಹ್ಮದ್ ಅವರು ಬಹುಮತದೊಂದಿಗೆ ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆಯಾದರು.

ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್ ಕಣಕ್ಕೆ

ತೆರವಾಗಿದ್ದ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಸಲೀಂ ಅಹ್ಮದ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿತ್ತು. ಮತ್ತೊಂದೆಡೆ ಮೈತ್ರಿಕೂಟದ ಪರವಾಗಿ ಬಿಜೆಪಿಯ ಪಿ.ಎಚ್. ಪೂಜಾರ್ ಸ್ಪರ್ಧಿಸಿದ್ದರು. ಸಭಾಪತಿ ಸ್ಥಾನಕ್ಕೆ ಒಟ್ಟು ಏಳು ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಐದು ಸಲೀಂ ಅಹ್ಮದ್ ಅವರ ಪರವಾಗಿದ್ದವು.

ಇದನ್ನೂ ಓದಿ:

ವಿಧಾನ ಪರಿಷತ್‌ನಲ್ಲಿ ಪಕ್ಷಗಳ ಬಲಾಬಲ

75 ಸದಸ್ಯ ಬಲದ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ 38 ಸ್ಥಾನಗಳನ್ನು ಹೊಂದಿದೆ. ಬಿಜೆಪಿ 25, ಜೆಡಿಎಸ್ 6 ಹಾಗೂ ಪಕ್ಷೇತರರು ಒಂದು ಸ್ಥಾನ ಹೊಂದಿದ್ದಾರೆ. ಐದು ಸದಸ್ಯ ಸ್ಥಾನಗಳು ಪ್ರಸ್ತುತ ಖಾಲಿಯಾಗಿವೆ.

ನಾಲ್ಕು ದಶಕಗಳ ರಾಜಕೀಯ ಅನುಭವ

ಪ್ರಸ್ತುತ ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕರಾಗಿರುವ ಸಲೀಂ ಅಹ್ಮದ್, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅಝೀಜ್ ಅಹ್ಮದ್ ಅವರ ಪುತ್ರರಾಗಿರುವ ಸಲೀಂ ಅಹ್ಮದ್ ಅವರು 1964ರ ಜನವರಿ 1ರಂದು ಜನಿಸಿದ್ದು, ಎಂ.ಎ. ಪದವಿ ಪಡೆದಿದ್ದಾರೆ. ಕಾಂಗ್ರೆಸ್‌ನ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ರಾಜಕೀಯ ಜೀವನ ಆರಂಭಿಸಿದ ಅವರು ಯುವ ಸಮಾವೇಶಗಳು, ತರಬೇತಿ ಶಿಬಿರಗಳು ಹಾಗೂ ಪಕ್ಷದ ವಿವಿಧ ಕಾರ್ಯಕ್ರಮಗಳ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !