ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಮ್ ಕಾರ್ಡ್ ಖರೀದಿಗೆ ಕೇಂದ್ರದ ಹೊಸ ರೂಲ್ಸ್: ಇನ್ಮುಂದೆ ರಿಯಲ್ ಟೈಮ್ ವೆರಿಫಿಕೇಷನ್ ಫಿಕ್ಸ್
ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ, ನಕಲಿ ಸಿಮ್ ಕಾರ್ಡ್ ಬಳಕೆ ಮತ್ತು ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸಿಮ್ ಕಾರ್ಡ್ ವಿತರಣೆ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ. ಹೊಸ ಸಿಮ್ ಪಡೆಯುವ ಮುನ್ನ ಗ್ರಾಹಕರ ಗುರುತು ಮತ್ತು ದಾಖಲೆಗಳನ್ನು ತ್ವರಿತವಾಗಿ ಪರಿಶೀಲಿಸುವ ವ್ಯವಸ್ಥೆಗೆ ಒತ್ತು ನೀಡಲಾಗಿದೆ.
ಸಿಮ್ ಕಾರ್ಡ್ ಖರೀದಿಗೆ ರಿಯಲ್ ಟೈಮ್ ವೆರಿಫಿಕೇಷನ್
ಹೊಸ ಮೊಬೈಲ್ ಸಂಪರ್ಕ ನೀಡುವ ಮೊದಲು ಗ್ರಾಹಕರ ಮಾಹಿತಿಯನ್ನು Real-Time Verification ಮೂಲಕ ಪರಿಶೀಲಿಸುವುದು ಕಡ್ಡಾಯವಾಗಲಿದೆ. ಟೆಲಿಕಾಂ ಕಂಪನಿಗಳು ಗ್ರಾಹಕರ ವಿವರಗಳನ್ನು ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಮೂಲಕ ಪರಿಶೀಲಿಸಬೇಕಾಗುತ್ತದೆ.
ನಕಲಿ ದಾಖಲೆಗಳಿಗೆ ಕಡಿವಾಣ
ನಕಲಿ ಅಥವಾ ಅನುಮಾನಾಸ್ಪದ ಗುರುತಿನ ದಾಖಲೆಗಳನ್ನು ಬಳಸುವ ವ್ಯಕ್ತಿಗಳಿಗೆ ಹೊಸ ಸಿಮ್ ಸಂಪರ್ಕ ನೀಡುವುದನ್ನು ತಡೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದರಿಂದ ಸೈಬರ್ ಅಪರಾಧಗಳಿಗೆ ಬಳಸುವ ನಕಲಿ ಮೊಬೈಲ್ ಸಂಪರ್ಕಗಳನ್ನು ಆರಂಭಿಕ ಹಂತದಲ್ಲೇ ನಿಯಂತ್ರಿಸಲು ಸಾಧ್ಯವಾಗಲಿದೆ.
ಇದನ್ನೂ ಓದಿ:
ಒಬ್ಬರಿಗೆ ಗರಿಷ್ಠ 9 SIM
ಸರ್ಕಾರದ ನಿಯಮಗಳ ಪ್ರಕಾರ, ಸಾಮಾನ್ಯ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಹೊಂದಲು ಅವಕಾಶ ಇರಲಿದೆ. ಆದರೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಗರಿಷ್ಠ 6 ಸಿಮ್‌ಗಳ ಮಿತಿ ಅನ್ವಯವಾಗಲಿದೆ.
ಸೈಬರ್ ವಂಚನೆ ಜಾಲದ ತನಿಖೆ
ಅಹಮದಾಬಾದ್‌ನಲ್ಲಿ ನಡೆದ ಸುಮಾರು 1.5 ಕೋಟಿ ಮೌಲ್ಯದ ‘Boss Scam’ ಪ್ರಕರಣದ ತನಿಖೆ ವೇಳೆ ಸೈಬರ್ ಅಪರಾಧಗಳಿಗೆ ಬಳಸಲಾಗಿದೆ ಎನ್ನಲಾದ ಸುಮಾರು 4,500 ಸಿಮ್ ಕಾರ್ಡ್‌ಗಳ ಸುಳಿವು ಪೊಲೀಸರಿಗೆ ಸಿಕ್ಕಿದೆ. ಈ ಜಾಲಕ್ಕೆ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸಂಪರ್ಕವಿರುವ ಸಾಧ್ಯತೆಯನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
Digital Arrest ಪ್ರಕರಣಗಳಿಗೂ ಕಡಿವಾಣ
ನಕಲಿ ಸಿಮ್‌ಗಳ ಮೂಲಕ ನಡೆಯುವ ಸೈಬರ್ ವಂಚನೆ, ಹಣಕಾಸು ವಂಚನೆ ಮತ್ತು ‘Digital Arrest’ ಹೆಸರಿನ ಮೋಸಗಳನ್ನು ನಿಯಂತ್ರಿಸುವುದು ಹೊಸ ನಿಯಮಗಳ ಪ್ರಮುಖ ಉದ್ದೇಶವಾಗಿದೆ. SIM Card ವಿತರಣೆಯಲ್ಲೇ ಕಟ್ಟುನಿಟ್ಟಿನ ಪರಿಶೀಲನೆ ಜಾರಿಯಾದರೆ ವಂಚಕರು ನಕಲಿ ಗುರುತಿನ ಮೂಲಕ ಸಂಪರ್ಕ ಪಡೆಯುವುದನ್ನು ತಡೆಯಲು ನೆರವಾಗಲಿದೆ.



