ಹೊಸದಿಗಂತ ವರದಿ ಚಿತ್ರದುರ್ಗ:
ಮಹರ್ಷಿ ಶ್ರೀ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ.ಹಗರಣದಲ್ಲಿ ಜಾರಿ ನಿರ್ದೇಶನಾಲಯವು ನಾಗೇಂದ್ರ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಅದರಡಿ ಹಗರಣದ ಆರೋಪ ಹೊತ್ತಿರುವ ನಾಗೇಂದ್ರ ಅವರು ಇದೀಗ ಸಚಿವರಾಗಿದ್ದು ಅವರು ತಕ್ಷಣವೇ ರಾಜೀನಾಮೆ ಸಲ್ಲಿಸಬೇಕೆಂದು ಭಾರತೀಯ ಜನತಾ ಪಕ್ಷವು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಲಾಯಿತು.
ಸೋಮವಾರದಿಂದ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಶುಕ್ರವಾರ ಪ್ರತಿಭಟನೆ ಸ್ಥಳದಿಂದ ಒನಕೆ ಓಬವ್ವ ವೃತ್ತದಲ್ಲಿನ ಕಾಂಗ್ರೆಸ್ ಕಚೇರಿ ಮುಂಭಾಗಕ್ಕೆ ಆಗಮಿಸಿದ ಪ್ರತಿಭಟನಾಕಾರರು ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಬಳಿಕ ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೋಲಿಸರು ಅವರನ್ನು ತಡೆದು ನಿಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಹಣ ಇದಾಗಿದೆ. ರಾಜ್ಯದ ಖಜಾನೆ ಹಣವನ್ನು ದೇಶದ ವಿವಿಧ ಬ್ಯಾಂಕ್‌ಗಳ ಖಾತೆಗೆ ವರ್ಗಾವಣೆ ಮಾಡಿ ಲೂಟಿ ಮಾಡಲಾಗಿದೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಷರತ್ತಿನ ಮೇಲೆ ಜಾಮೀನು ಪಡೆದು ಸಚಿವ ನಾಗೇಂದ್ರ ಅವರು ಹೊರಗೆ ಇದ್ದಾರೆ. ಅವರು ಆರೋಪಮುಕ್ತರಾಗಿಲ್ಲ. ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲೆಯಲ್ಲಿ ಬಿಜೆಪಿ ಹೋರಾಟ ಮಾಡಿದೆ ಎಂದು ತಿಳಿಸಲಾಯಿತು.
ನಾಗೇಂದ್ರ ಅವರು ಸಂವಿಧಾನದ ಮೌಲ್ಯಗಳಿಗೆ ಅಪಚಾರ ಎಸಗಿದ್ದಾರೆ. ಹಗರಣದಲ್ಲಿ ಆಗಿನ ಸಚಿವ ನಾಗೇಂದ್ರ ಅವರ ಮೌಖಿಕ ಸೂಚನೆ ಬಹುದೊಡ್ಡ ಪಾತ್ರ ವಹಿಸಿದೆ. ಸಚಿವರು ಮೌಖಿಕವಾಗಿ ಸೂಚಿಸಿರುವ ಹಿನ್ನೆಲೆಯಲ್ಲೇ ನಿಗಮದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇಡೀ ಭ್ರಷ್ಠ್ಟಾಚಾರದಲ್ಲಿ ಸಚಿವರ ಸೂಚನೆ ಮಹತ್ವದ ಪಾತ್ರವಿದೆ ಎಂಬ ಅಂಶಗಳನ್ನು ತನಿಖಾ ಸಂಸ್ಥೆಗಳು ತಿಳಿಸಿದೆ. ಹಗರಣದ ವಿಷಯದಲ್ಲಿ ಆಧಾರ ಇದ್ದಾಗಲೂ ಮತ್ತೆ ಸಚಿವರಾಗುವುದು ಪ್ರಜಾಪ್ರಭುತ್ವ ಹಾಗೂ ಎಸ್‌ಟಿ ಸಮುದಾಯಕ್ಕೆ ಕಳಂಕ ಎಂದು ಪ್ರತಿಭಟನಾಕಾರರು ದೂರಿದರು.
ಇದನ್ನೂ ಓದಿ:
ನಾಗೇಂದ್ರ ಅವರಿಗೆ ಜಾಮೀನು ಸಿಕ್ಕಿದೆ ಅಷ್ಟೆ, ಇನ್ನೂ ಕ್ಲೀನ್ ಚಿಟ್ ಸಿಕ್ಕಿಲ್ಲ. ನ್ಯಾಯಾಲಯ ಆರೋಪ ಮುಕ್ತ ಮಾಡಿಲ್ಲ. ಆದ್ದರಿಂದ ಸಚಿವರಾಗಿ ಮುಂದುವರಿಯುವಂತಿಲ್ಲ. ಪಕ್ಷದ ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ ಎಂಬ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದ್ದು, ರಾಜ್ಯಪಾಲರನ್ನು ನಾಗೇಂದ್ರರ ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಎಸ್.ಟಿ.ಮೋರ್ಚಾದ ಮಾಜಿ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಯಾದವ್, ಡಾ.ಮಂಜುನಾಥ್, ಬಿಜೆಪಿ ಮೊಳಕಾಲ್ಮೂರು ಮಂಡಲ ಅಧ್ಯಕ್ಷ ರಾಮರೆಡ್ಡಿ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೂರ್ತಿ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಹನುಮಂತಪ್ಪ ಉಪ್ಪಾರ್, ಜಿಲ್ಲಾ ಕಾರ್ಯದರ್ಶಿ ರೇಖಾ, ಉಪಾಧ್ಯಕ್ಷ ಲಿಂಗರಾಜು, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಬಾಲರಾಜ್, ನಾಯಕನಹಟ್ಟಿ ಮಂಡಲ ಪ್ರಧಾನ ಕಾರ್ಯದರ್ಶಿ ಮೂರ್ತಿ, ಮಂಡಲ ಪ್ರಧಾನ ಕಾರ್ಯದರ್ಶಿ ಗೋವಿಂದಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



