August 25, 2026
Tuesday, August 25, 2026
spot_img

ಭದ್ರಾ ಡ್ಯಾಂನಿಂದ 3 ಟಿಎಂಸಿ ನೀರು ಬಿಡಲು ಆದೇಶ: ರೈತರ ಆಕ್ರೋಶ; ಆದೇಶ ಹಿಂಪಡೆಯಲು ಆಗ್ರಹ

ಹೊಸದಿಗಂತ ವರದಿ ದಾವಣಗೆರೆ:

ಭದ್ರಾ ಮೇಲ್ದಂಡೆ ಯೋಜನೆಯ ಪ್ರಾಯೋಗಿಕ ಚಾಲನೆಗೆ ಭದ್ರಾ ಡ್ಯಾಂ ನಿಂದ 3 ಟಿಎಂಸಿ ನೀರು ಬಿಡುವಂತೆ ಹೊರಡಿಸಿದ ಆದೇಶವನ್ನು ತಕ್ಷಣ ಹಿಂಪಡೆಯಲು ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟದಿಂದ ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಜಿಲ್ಲೆಯ ರೈತರು ದಿನ ಮಳೆ ಕೊರತೆಯಿಂದ ಭದ್ರಾ ಡ್ಯಾಂ ನೀರಿಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಬಿಡಲು ಆದೇಶಿರುವುದು ರೈತವಿರೋಧಿ ನಿರ್ಧಾರವಾಗಿದೆ.

ಇದನ್ನೂ ಓದಿ:

ಆಗಸ್ಟ್ ಮುಗಿಯುತ್ತಿದ್ದರೂ ಇನ್ನೂ ಭದ್ರಾ ಡ್ಯಾಂ ಭರ್ತಿಯಾಗಿಲ್ಲ. ಹೀಗಿರುವಾಗ ಕಾಂಗ್ರೆಸ್ ಸರ್ಕಾರದ ಆದೇಶ ರೈತರಿಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ ಎಂದು ಒಕ್ಕೂಟದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಭದ್ರಾ ಡ್ಯಾಂ ನಮ್ಮ ಜಿಲ್ಲೆಯ ಜೀವನಾಡಿ. ಭದ್ರಾ ಮೇಲ್ದಂಡೆ ಯೋಜನೆಗೆ ನಿಯಮಾನುಸಾರ ತುಂಗಾ ನದಿಯಿಂದ ಭದ್ರಾ ಡ್ಯಾಂ ಗೆ 17.40 ಟಿಎಂಸಿ ನೀರನ್ನು ಎತ್ತಿ ಹರಿಸುವವರೆಗೂ ಭದ್ರಾ ಡ್ಯಾಂನಿಂದ ಒಂದು ಹನಿ ನೀರು ಮೇಲ್ದಂಡೆಗೆ ಕೊಡುವಂತಿಲ್ಲ. ಡಿ.ಕೆ.ಶಿವಕುಮಾರ್ ಸರ್ಕಾರ ಭದ್ರಾ ಅಚ್ಚುಕಟ್ಟು ರೈತರನ್ನು ಅಭದ್ರ ಸ್ಥಿತಿಗೆ ನೂಕುತ್ತಿದೆ. ತಕ್ಷಣವೇ ಸರ್ಕಾರ ಭದ್ರಾ ಮೇಲ್ದಂಡೆಗೆ ನೀರು ಹರಿಸುವ ಆದೇಶ ಹಿಂಪಡೆಯದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ತಾಪಂ ಮಾಜಿ ಉಪಾಧ್ಯಕ್ಷ ಬೇತೂರು ಸಂಗನಗೌಡ, ಮುಖಂಡರಾದ ಬಿ.ವಿರೂಪಾಕ್ಷಪ್ಪ, ಬಿ.ಬಸವರಾಜಯ್ಯ, ಲೋಕಿಕೆರೆ ಶಂಕರಮೂರ್ತಿ, ವಡ್ಡಿನಹಳ್ಳಿ ಲಿಂಗರಾಜ, ವೈ.ಆರ್.ಬಸವರಾಜಪ್ಪ, ಅವರಗೆರೆ ಸಿ.ಈಶ್ವರಪ್ಪ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !