ಹೊಸದಿಗಂತ ವರದಿ ತುಮಕೂರು:
ರಾಜ್ಯ ಸರ್ಕಾರ ಯುವಜನರ ಸಬಲೀಕರಣಕ್ಕೆ ಜಾರಿಗೆ ತಂದಿರುವ ಭಾರತ ಯುವ ಜೋಡೋ ಸಂಘಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿಯಾಗುವಂತೆ ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ನಿಖಲ್ ರಾಜಣ್ಣ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯಸರಕಾರ ಯುವಜನರನ್ನು ನಿರುದ್ಯೋಗ ಮತ್ತಿತರರ ಕಾರಣಗಳಿಂದ ದುಶ್ಚಟಗಳಿಗೆ ಬಲಿಯಾಗದಂತೆ ಅವರನ್ನು ತಡೆಯುವ ನಿಟ್ಟಿನಲ್ಲಿ ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆಗೆ ಮುಂದಾಗಿದ್ದು, ಈಗಾಗಲೇ ಸಂಘಗಳ ನೊಂದಣಿ ಕಾರ್ಯ ಆರಂಭವಾಗಿವೆ. ತುಮಕೂರು ಜಿಲ್ಲೆ ಭಾರತ್ ಜೋಡೋ ಯುವ ಸಂಘಗಳ ನೊಂದಣಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಶ್ಲಾಘನೀಯ. ಇಂತಹ ಕಾರ್ಯದಲ್ಲಿ ಯುವಕಾಂಗ್ರೆಸ್ ಕಾರ್ಯಕರ್ತರು ಕೈಜೋಡಿಸಬೇಕೆಂಬ ಉದ್ದೇಶದಿಂದ ಜಾತ್ಯಾತೀತ, ಪಕ್ಷಾತೀತ ಸರಕಾರದ ಕಾರ್ಯಕ್ರಮದಲ್ಲಿ ಯುವಕರು ಹೆಚ್ಚು ನೊಂದಣಿಯಾಗಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ಪ್ರತಿ ಗ್ರಾಮಪಂಚಾಯಿತಿ ಒಂದರಂತೆ ಹಾಗೂ ನಗರ ಪ್ರದೇಶಗಳಲ್ಲಿ ಜನಸಂಖ್ಯೆವಾರು ಮತ್ತು ಪಟ್ಟಣಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆ, ಮಹಾನಗರಪಾಲಿಕೆಗಳಿಗೆ ಸಂಘಗಳ ಸಂಖ್ಯೆಯನ್ನು ನಿಗಧಿಗೊಳಿಸಲಾಗಿದೆ
.ಪ್ರತಿ ನೂರು ಸದಸ್ಯರನ್ನು ಒಳಗೊಂಡ ಭಾರತ್ ಜೋಡೋ ಯುವ ಸಂಘಕ್ಕೆ ವಾರ್ಷಿಕ 10 ಲಕ್ಷ ರೂ.ಗಳ ಅನುದಾನ ನೀಡುವ ಮೂಲಕ ಯುವಜನರು ಕ್ರೀಡೆ, ಸಾಂಸ್ಕೃತಿಕ ಮತ್ತು ಸಮಾಜ ಸೇವೆಯಲ್ಲಿ ತೊಡಗುವಂತೆ ಮಾಡಲಾಗುವುದು. ಇದಕ್ಕಾಗಿ ಪ್ರತಿ ವರ್ಷ ಬಜೆಟ್ನಲ್ಲಿ 10ಕೋಟಿ ರೂ.ಗಳನ್ನು ಕಾಯ್ದಿರಿಸುವುದಾಗಿ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಡಿ.ಕೆ.ಶಿವಕುಮಾರ ಅವರು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಇದರ ಸದುಪಯೋಗವನ್ನು ಪಡೆದುಕೊಂಡು ಯುವಜನರ ವಿಕಾಸ, ಸೌಹಾರ್ಧ ಕರ್ನಾಟಕ ನಿರ್ಮಾಣ, ಸಮುದಾಯಗಳ ಅಭಿವೃದ್ದಿ, ಸಾಮಾಜಿಕ ಸಾಮರಸ್ಯ, ಕ್ರೀಡೆ,ದೈಹಿಕ ಚಟುವಟಿಕೆ ಮತ್ತು ಕೌಶಲ್ಯಾಭಿವೃದ್ದಿಯಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ. ಹಾಗಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳುವಂತೆ ನಿಖಿಲ್ ರಾಜಣ್ಣ ತಿಳಿಸಿದರು.
ಇದನ್ನೂ ಓದಿ;
ತುಮಕೂರು ಜಿಲ್ಲೆಯಲ್ಲಿ ಇದುವರೆಗೂ ಗ್ರಾಮೀಣ ಭಾಗದಲ್ಲಿ 329 ಮತ್ತು ನಗರ ಭಾಗದಲ್ಲಿ ಸುಮಾರು 39 ಭಾರತ್ ಜೋಡೋ ಯುವ ಸಂಘಗಳು ರಚನೆಯಾಗಿದ್ದು, ಗ್ರಾಮಿಣ ಭಾಗದಲ್ಲಿ 11700 ಮತ್ತು ನಗರ ಭಾಗದಲ್ಲಿ 12 ಸಾವಿರ ಯುವಜನರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ.ನೊಂದಾವಣೆ ಕೊನೆಯ ದಿನಾಂಕವನ್ನು ಆಗಸ್ಟ್ 31ಕ್ಕೆ ಕೊನೆಗೊಳಿಸುತಿದ್ದು, ಹೆಚ್ಚಿನ ಸದಸ್ಯರ ನೊಂದಾವಣೆಗೆ ದಿನಾಂಕವನ್ನು ವಿಸ್ತರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ನಿಖಿಲ್ ರಾಜಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಇಲಾಹಿ ಸಿಖಂದರ್, ಯುವ ಕಾಂಗ್ರೆಸ್ ಮುಖಂಡರಾದ ತಿಪಟೂರು ಯತೀಂದ್ರ , ಶಶಿಧರ್, ಮಣಿಕಂಠ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.



