ಹೊಸದಿಗಂತ ವರದಿ ರಾಮನಗರ:
ಶಾಂತಿಲಾಲ್ ಲೇಔಟ್ನಲ್ಲಿರುವ ನಿರ್ಮಾಣ ಹಂತದ ಮನೆಯಲ್ಲಿ 200 ಮತ್ತು 500 ಮುಖಬೆಲೆಯ ನಕಲಿ ನೋಟು ತಯಾರಿಸುವ ಜಾಲದ ಬೆನ್ನಟ್ಟಿರುವ ಐಜೂರು ಠಾಣೆ ಪೊಲೀಸರು, ಮತ್ತೆ ಮೂವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದವರ ಸಂಖ್ಯೆ 10ಕ್ಕೇರಿದೆ.
ತರಕಾರಿ ವ್ಯಾಪಾರಿಯಾಗಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಟೌನ್ನ ಅಶ್ರಫ್ ಅಲಿ, ಆಟೋಚಾಲಕನಾಗಿರುವ ಕನಕಪುರ ತಾಲ್ಲೂಕಿನ ಕಲ್ಲಹಳ್ಳಿಯ ಮಂಜು ಅಲಿಯಾಸ್ ಶಿವರಾಜು, ಟ್ರಾಕ್ಟರ್ ಚಾಲಕನಾಗಿರುವ ಕನಕಪುರದ ಮೇಳೆಕೋಟೆಯ ನಾಗರಾಜು ಬಂಧಿತರು. ಅಶ್ರಫ್ ಸೂಚನೆ ಮೇರೆಗೆ ಮಂಜು ಮತ್ತು ನಾಗರಾಜು ನೋಟು ತಯಾರಿಕೆಗೆ ಅಗತ್ಯವಾದ ಪರಿಕರಗಳನ್ನು ಸಂಪತ್ ಮತ್ತು ಸಂತೋಷ್ಗೆ ತಲುಪಿಸಿದ್ದರು.
ಇದನ್ನೂ ಓದಿ:
ಐದು ದಿನಗಳ ಹಿಂದೆ (ಆ. 31) ಪ್ರಕರಣ ಬೇಧಿಸಿದ್ದ ಪೊಲೀಸರು ಮನೆ ಮಾಲೀಕ ಮಾಗಡಿ ತಾಲ್ಲೂಕಿನ ಗಟ್ಟಿಪುರದ ಸಂತೋಷ್, ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿಯ ಸಂಪತ್, ರಾಮನಗರದ ಐಜೂರಿನ ರಾಜೇಶ್, ಕನಕಪುರದ ಡಿ.ಕೆ. ಲೇಔಟ್ನ ರೇಣುಕರಾಜ, ಕಲ್ಲಹಳ್ಳಿ ಗೇಟ್ನ ಶಿವರಾಜ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕಲ್ಲಹಳ್ಳಿಯ ಗೋವಿಂದರಾಜನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಬಲೆಗೆ ಬಿದ್ದಿರುವವರೆಲ್ಲರೂ ಕಾಲಾಳುಗಳು
ಇದುವರೆಗೆ ಪೊಲೀಸ್ ಬಲೆಗೆ ಬಿದ್ದಿರುವವರೆಲ್ಲರೂ ಜಾಲದ ಕಾಲಾಳುಗಳು. ಹಾಗಾಗಿ, ಜಾಲದ ಸೂತ್ರಧಾರರ ಪತ್ತೆಗೆ ಬಲೆ ಬೀಸಲಾಗಿದೆ. ಆರಂಭದಲ್ಲಿ ಸಂಪತ್ ಇಡೀ ಜಾಲದ ಪ್ರಮುಖ ಆರೋಪಿ ಎಂಬ ಅನುಮಾನವಿತ್ತು. ಆದರೆ, ತನಿಖೆ ವೇಳೆ ಆತ ಮತ್ತೊಬ್ಬರ ಆಣತಿಯಂತೆ ಕೆಲಸ ಮಾಡುತ್ತಿರುವುದು ಗೊತ್ತಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆ ಮಾಹಿತಿಯನ್ನು ಬೆನ್ನಟ್ಟಿದಾಗ ಸಂಪತ್ ಗೆ ಮಾರ್ಗದರ್ಶನ ಮಾಡಿದ್ದ ಅಶ್ರಫ್ ಅಲಿ ಹೆಸರು ಕೇಳಿ ಬಂತು. ಆತನೇ ಸೂತ್ರಧಾರನಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಬಂಧಿಸಿದ್ದೇವೆ. ಆದರೆ, ಆತ ಸಹ ಯಾರೋ ಹೇಳಿದಂತೆ ಕೆಲಸ ಮಾಡಿದ್ದಾನೆ. ಹಾಗಾಗಿ, ಈತನ ಸಂಪರ್ಕದಲ್ಲಿರುವ ಕೊಳ್ಳೆಗಾಲ ಮಹೇಶ್, ಚಂದ್ರು ಹಾಗೂ ಕನಕಪುರದ ಮಲ್ಲಿಕ್ ಎಂಬುವರ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ಹೇಳಿವೆ.



