ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬಾಗಲಕೋಟೆ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ತಲೆದೂರಿರುವ ತೀವ್ರ ಬರ ಪರಿಸ್ಥಿತಿ ಮತ್ತು ಅದರಿಂದ ಉಂಟಾಗಿರುವ ಬೆಳೆಹಾನಿಯ ವಾಸ್ತವ ಸ್ಥಿತಿಗತಿಗಳನ್ನು ಹತ್ತಿರದಿಂದ ಅವಲೋಕಿಸಲು ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ರೈತರ ಹಿತ ಕಾಯಲು ಸರ್ಕಾರ ಬದ್ಧ
ಹೆಲಿಕಾಪ್ಟರ್ ಮೂಲಕ ಒಣಗಿದ ಜಮೀನುಗಳು ಹಾಗೂ ನೀರಿನ ಮೂಲಗಳ ಪರಿಸ್ಥಿತಿಯನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು, ಬರದ ತೀವ್ರತೆಗೆ ತತ್ತರಿಸಿರುವ ರೈತರ ಮತ್ತು ಸಾರ್ವಜನಿಕರ ಹಿತ ಕಾಯಲು ತಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ಪರಿಸ್ಥಿತಿಯನ್ನು ನಿರಂತರವಾಗಿ ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ತೊಂದರೆಗೊಳಗಾದ ಜನರಿಗೆ ಮತ್ತು ಅನ್ನದಾತರಿಗೆ ಸಮಯಕ್ಕೆ ಸರಿಯಾಗಿ ಅಗತ್ಯವಿರುವ ಎಲ್ಲಾ ರೀತಿಯ ಪರಿಹಾರ ಕ್ರಮಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರೈತರ ಜಮೀನಿಗೆ ಖುದ್ದು ಭೇಟಿ
ವೈಮಾನಿಕ ಸಮೀಕ್ಷೆ ಬಳಿಕ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಕ್ರಾಸ್ ಬಳಿ ಇರುವ ರೈತ ನಂದಪ್ಪ ಸಂಗಪ್ಪ ಬಾರಕೇರ ಅವರ ಜಮೀನಿಗೆ ಮುಖ್ಯಮಂತ್ರಿಗಳು ಖುದ್ದು ಭೇಟಿ ನೀಡಿ, ಬರ ಪರಿಸ್ಥಿತಿಯ ತೀವ್ರತೆಯನ್ನು ಅವಲೋಕಿಸಿದ್ದಾರೆ. ಜಮೀನಿನಲ್ಲಿ ಮಳೆಯಿಲ್ಲದೆ ಸಂಪೂರ್ಣವಾಗಿ ಒಣಗಿ ಹೋಗಿರುವ ಸೂರ್ಯಕಾಂತಿ, ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳನ್ನು ವೀಕ್ಷಿಸಿದ ಅವರು, ಸಂಕಷ್ಟದಲ್ಲಿರುವ ಅನ್ನದಾತರಿಗೆ ಧೃತಿಗೆಡದಂತೆ ಧೈರ್ಯ ತುಂಬಿದ್ದಾರೆ.
ಜಮೀನಿನಲ್ಲೇ ಮನವಿ ಆಲಿಸಿದ ಸಿಎಂ
ಜಮೀನಿನಲ್ಲೇ ನಿಂತು ರೈತರ ಮನವಿಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ಅನ್ನ ನೀಡುವ ರೈತರ ಕಣ್ಣೀರು ಒರೆಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ಈ ತೀವ್ರ ಸಂಕಷ್ಟದ ಸಮಯದಲ್ಲಿ ಇಡೀ ಸರ್ಕಾರ ನಿಮ್ಮೊಂದಿಗೆ ನಿಲ್ಲಲಿದ್ದು, ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಈ ಸಂದರ್ಭದಲ್ಲಿ ರಾಜ್ಯಸಭಾ ಸಂಸದ ಡಾ. ಜಿ.ಸಿ. ಚಂದ್ರಶೇಖರ್, ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್, ಶಾಸಕ ಉಮೇಶ್ ಮೇಟಿ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದು, ಬೆಳೆ ನಷ್ಟದ ಸಂಪೂರ್ಣ ಮಾಹಿತಿ ಪಡೆದುಕೊಂಡರು.



