September 7, 2026
Monday, September 7, 2026
spot_img

ಶಿರಸಿ–ಹಾವೇರಿ ಹೆದ್ದಾರಿ ಕಾಮಗಾರಿಗೆ ಡೆಡ್‌ಲೈನ್: ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಕಾಗೇರಿ ಸೂಚನೆ

ಹೊಸದಿಗಂತ ವರದಿ ಶಿರಸಿ:

ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ 766ರ ನಿರ್ಮಾಣ ಕಾಮಗಾರಿಯನ್ನು ಅಕ್ಟೋಬರ್ ತಿಂಗಳಿನಿಂದ ಆರಂಭಿಸಿ, ಬರುವ ಮಾರ್ಚ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಲು ಗುತ್ತಿಗೆದಾರರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

​ತಮ್ಮ ಕಚೇರಿಯಲ್ಲಿ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಗುತ್ತಿಗೆದಾರರ ಸಭೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ರಸ್ತೆ ನಿರ್ಮಾಣದ ಜವಾಬ್ದಾರಿಯನ್ನು ಆರ್.ಎನ್.ಎಸ್ (21 ಕಿ.ಮೀ) ಹಾಗೂ ಅಮ್ಮಾಪುರ ಕನ್‌ಸ್ಟ್ರಕ್ಷನ್ (8.4 ಕಿ.ಮೀ) ಸಂಸ್ಥೆಗಳು ವಹಿಸಿಕೊಂಡಿವೆ. ಮಳೆಗಾಲಕ್ಕೂ ಮುನ್ನ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ಮುಗಿಸಲು ಸೂಚಿಸಲಾಗಿದ್ದು, ಅಧಿಕಾರಿಗಳು ಶಿರಸಿಯಲ್ಲೇ ವಾಸ್ತವ್ಯ ಹೂಡಿ ಕೆಲಸಕ್ಕೆ ವೇಗ ನೀಡಲು ನಿರ್ದೇಶಿಸಲಾಗಿದೆ.

ಇದನ್ನೂ ಓದಿ:

​ರಸ್ತೆ ವಿಸ್ತರಣೆಗಾಗಿ ನಗರ ಭಾಗದಲ್ಲಿ ಆಸ್ತಿ ತೆರವುಗೊಳಿಸಬೇಕಿದ್ದು, 110 ಕಡೆಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಭೂಮಿ ಬಿಟ್ಟುಕೊಡಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಕಚೇರಿಯಿಂದ ಪ್ರಸ್ತಾವನೆ ಹೋಗಬೇಕಿದೆ. ಕಾಮಗಾರಿ ಸುಗಮವಾಗಿ ನಡೆಯಲು ಜಿಲ್ಲಾಡಳಿತ, ಹೆಸ್ಕಾಂ, ನಗರಸಭೆ ಮತ್ತು ಅರಣ್ಯ ಇಲಾಖೆಯ ಸಹಕಾರ ಅಗತ್ಯವಿದೆ. ಅಗಸೇಬಾಗಿಲಿನಿಂದ ಹುಬ್ಬಳ್ಳಿ ರಸ್ತೆವರೆಗೆ ಹಾಗೂ ಕೋಟೆಕೆರೆಯಿಂದ ಚಿಪಗಿವರೆಗೆ ಇರುವ ಅತಿಕ್ರಮಣ ತೆರವುಗೊಳಿಸಬೇಕಾಗಿದೆ. ಇನ್ನು ಶಿರಸಿ-ಕುಮಟಾ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಹಾರುಗಾರ್ ಸೇತುವೆ ಹಾಗೂ ಗದ್ದೆಮನೆ ಬಳಿಯ ರಸ್ತೆ ನಿರ್ಮಾಣ ಮಾತ್ರ ಬಾಕಿಯಿದೆ ಎಂದರು.

​ಇದೇ ವೇಳೆ, ಬಿಸಲಕೊಪ್ಪದಿಂದ ತಡಸ್ ವರೆಗಿನ 65 ಕಿ.ಮೀ ಹುಬ್ಬಳ್ಳಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸೇರ್ಪಡೆಗೊಳಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಮಂಜೂರಾಗುವವರೆಗೆ ರಾಜ್ಯ ಸರ್ಕಾರವೇ ರಸ್ತೆ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !