ಹೊಸದಿಗಂತ ವರದಿ ಕಲಬುರಗಿ:
ನಗರದ ಹಿರೇನಂದೂರ ಸ್ಟೇಷನ್ ತಾಂಡಾದ 22 ವರ್ಷದ ಯುವತಿ ಸುರೇಖಾ ಪವಾರ್ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯನ್ನು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಬಾಂಗ್ಲಾದೇಶಕ್ಕೆ ಕರೆದೊಯ್ದು ಅಲ್ಲಿ ಕಿರುಕುಳ ನೀಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸುರೇಖಾ ನಗರದ ಇಂಡಸ್ಟ್ರಿಯಲ್ ಏರಿಯಾದ ನೆಕ್ಸ್ಟ್ ಜನ್ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಮೇ 20ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದ ಅವರು ಬಳಿಕ ಮನೆಗೆ ವಾಪಸ್ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಯುವತಿಯ ಪತ್ತೆಗೆ ಮನವಿ ಮಾಡಿದ್ದರು. ಮನೆ ತೊರೆದ ಬಳಿಕ ಸುರೇಖಾ ಸಹೋದರನಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ತಮಗೆ ಕಿರುಕುಳ ನೀಡಲಾಗಿದೆ ಎಂದು ಉಲ್ಲೇಖಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ:
ಪತ್ರದಲ್ಲಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ವೇಳೆ ಕೆಲವರು ತಮಗೆ ತೊಂದರೆ ನೀಡಿದ್ದಾಗಿ ಹಾಗೂ ಬಾಂಗ್ಲಾದೇಶಕ್ಕೆ ಕರೆದೊಯ್ಯಲಾಗಿದೆ ಎಂಬ ಆರೋಪಗಳನ್ನು ಮಾಡಿರುವುದಾಗಿ ಕುಟುಂಬದವರು ಹೇಳಿದ್ದಾರೆ. ಈ ಪತ್ರವನ್ನು ಆಧರಿಸಿ ಸುರೇಖಾ ಕುಟುಂಬಸ್ಥರು ಕಲಬುರಗಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸೆ.23ಕ್ಕೆ ಆದೇಶ ಕಾಯ್ದಿರಿಸಿದೆ.



