ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್‌ನಲ್ಲಿ ನಡೆಯುತ್ತಿರೋ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತನ್ನ ಪದಕದ ಖಾತೆ ತೆರೆದಿದೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡದ ಸ್ಪರ್ಧೆಯಲ್ಲಿ ಎಲಾವೆನಿಲ್ ವಲರಿವನ್, ಸೋನಂ ಮಸ್ಕರ್ ಹಾಗೂ ವಿದರ್ಸಾ ವಿನೋದ್ ಅವರ ತಂಡ ಬೆಳ್ಳಿ ಪದಕ ಗೆದ್ದು ಭಾರತದ ಪದಕ ಅಭಿಯಾನಕ್ಕೆ ಶುಭ ಆರಂಭ ನೀಡಿದ್ದಾರೆ.
ಐಚಿ ಪ್ರಿಫೆಕ್ಚರಲ್ ಜನರಲ್ ಶೂಟಿಂಗ್ ಗ್ಯಾಲರಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತೀಯ ತ್ರಿವಳಿ ಜೋಡಿ ಒಟ್ಟು 1898.0 ಅಂಕ ಗಳಿಸಿ ಎರಡನೇ ಸ್ಥಾನ ಪಡೆದಿತು. ಚೀನಾ 1904.2 ಅಂಕಗಳೊಂದಿಗೆ ಚಿನ್ನ ಗೆದ್ದರೆ, ಆತಿಥೇಯ ಜಪಾನ್ 1897.1 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
ಎರಡನೇ ಸ್ಥಾನ ಕಾಯ್ದುಕೊಂಡ ಇಂಡಿಯಾ
ಭಾರತದ ಪರ ಸೋನಂ ಮಸ್ಕರ್ 634.1 ಅಂಕ ಗಳಿಸಿ ಉತ್ತಮ ಆರಂಭ ಒದಗಿಸಿದರು. ಬಳಿಕ ವಿದರ್ಸಾ ವಿನೋದ್ 630.4 ಅಂಕ ಗಳಿಸಿದರೆ, ಕೊನೆಯ ಭಾರತೀಯ ಶೂಟರ್ ಆಗಿ ಕಣಕ್ಕಿಳಿದ ಎಲಾವೆನಿಲ್ ವಲರಿವನ್ 633.5 ಅಂಕ ಗಳಿಸಿ ತಂಡವನ್ನು ಪದಕದ ರೇಸ್‌ನಲ್ಲಿ ಉಳಿಸಿದರು. ಮೂವರ ಸ್ಥಿರ ಪ್ರದರ್ಶನದಿಂದ ಭಾರತ ಎರಡನೇ ಸ್ಥಾನವನ್ನು ಕಾಯ್ದುಕೊಂಡಿತು.
ಇದನ್ನೂ ಓದಿ:
ವೈಯಕ್ತಿಕ ಫೈನಲ್‌ನಲ್ಲೂ ಬೆಳ್ಳಿ ಗೆದ್ದ ಎಲಾವೆನಿಲ್
ಇದೇ ಸ್ಪರ್ಧೆಯ ವೈಯಕ್ತಿಕ ಅರ್ಹತಾ ಹಂತದಲ್ಲೂ ಎಲಾವೆನಿಲ್ ಮತ್ತು ಸೋನಂ ಗಮನ ಸೆಳೆದಿದ್ದು, ಇಬ್ಬರೂ ಮಹಿಳೆಯರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಬಳಿಕ ನಡೆದ ವೈಯಕ್ತಿಕ ಫೈನಲ್‌ನಲ್ಲೂ ಎಲಾವೆನಿಲ್ ಬೆಳ್ಳಿ ಪದಕ ಗೆದ್ದು ಒಂದೇ ದಿನ ಎರಡು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.
ಭಾರತದ ಪದಕ ಬೇಟೆಗೆ ಭರ್ಜರಿ ಆರಂಭ
ಏಷ್ಯನ್ ಗೇಮ್ಸ್‌ನ ಆರಂಭದಲ್ಲೇ ಶೂಟಿಂಗ್ ತಂಡ ನೀಡಿರುವ ಪ್ರದರ್ಶನ ಭಾರತಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ತಂಡದ ಬೆಳ್ಳಿ ಪದಕದೊಂದಿಗೆ ಆರಂಭವಾದ ಪದಕ ಬೇಟೆ, ಎಲಾವೆನಿಲ್ ಅವರ ವೈಯಕ್ತಿಕ ಬೆಳ್ಳಿಯಿಂದ ಮತ್ತಷ್ಟು ಗಮನ ಸೆಳೆದಿದೆ. ಮುಂದಿನ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಇನ್ನಷ್ಟು ಪದಕಗಳನ್ನು ಗೆಲ್ಲುವತ್ತ ಕಣ್ಣಿಟ್ಟಿದ್ದಾರೆ.



