ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಿಂದ ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಭಾರತದ ಖ್ಯಾತ ವುಶು ಆಟಗಾರ್ತಿ ರೋಶಿಬಿನಾ ದೇವಿ ಅವರು ಮಹಿಳೆಯರ 60 ಕೆಜಿ ಸಾಂಡಾ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಂದು (ಗುರುವಾರ) ಮುಂಜಾನೆ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಜಾಂಗ್ ಕ್ಸಿಯಾವೊಯು ವಿರುದ್ಧ ರೋಶಿಬಿನಾ ದೇವಿ ಅವರು 0-2 ಅಂತರದಿಂದ ಹೋರಾಡಿ ಸೋಲನ್ನೊಪ್ಪಿಕೊಂಡರು. ಚಿನ್ನದ ಪದಕ ಸ್ವಲ್ಪದರಲ್ಲೇ ಕೈತಪ್ಪಿದರೂ, ಅವರ ಈ ಅದ್ಭುತ ಪ್ರದರ್ಶನ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದೆ.
ಮೂರು ಬ್ಯಾಕ್-ಟು-ಬ್ಯಾಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ
ಮಣಿಪುರ ಮೂಲದ ರೋಶಿಬಿನಾ ದೇವಿ ಅವರ ಈ ಸಾಧನೆ ಭಾರತೀಯ ವುಶು ಕ್ರೀಡಾ ಇತಿಹಾಸದಲ್ಲಿ ದಾಖಲೆಯ ಪುಟ ಸೇರಿದೆ. 2018ರ ಏಷ್ಯನ್ ಗೇಮ್ಸ್ನಲ್ಲಿ ಕಂಚು, 2022ರ ಹ್ಯಾಂಗ್ಝೌ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದಿದ್ದ ಅವರು, ಇದೀಗ ಮತ್ತೊಮ್ಮೆ ಬೆಳ್ಳಿ ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್ನಲ್ಲಿ ಸತತ ಮೂರು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ವುಶು ಕ್ರೀಡಾಪಟು ಎಂಬ ಐತಿಹಾಸಿಕ ಕೀರ್ತಿಗೆ ಭಾಜನರಾಗಿದ್ದಾರೆ. ಜಪಾನ್ ಅಖಾಡದಲ್ಲಿ ಅವರ ಈ ಹಾದಿ ಸುಲಭವಾಗಿರಲಿಲ್ಲ. ಸೆಮಿಫೈನಲ್ನಲ್ಲಿ ಇಂಡೋನೇಷ್ಯಾದ ಥಾನಿಯಾ ಕುಸುಮಾನಿಂಗತ್ಯಾಸ್ ಅವರನ್ನು 2-0 ದಿಂದ ಮಣಿಸಿದ್ದ ಅವರು, ಅದಕ್ಕೂ ಮುನ್ನ 2023 ರ ವಿಶ್ವ ಚಾಂಪಿಯನ್ ವಿಯೆಟ್ನಾಂನ ನ್ಗುಯೆನ್ ಥಿ ಥು ಥುಯ್ ಅವರನ್ನು ಸೋಲಿಸಿ ಜಗತ್ತಿಗೆ ತಮ್ಮ ತಾಕತ್ತು ತೋರಿಸಿದ್ದರು.
ಇದನ್ನೂ ಓದಿ:
ಜ್ವರದ ನಡುವೆಯೂ ಮಗಳ ದೇಶಪ್ರೇಮ: ಭಾವುಕರಾದ ತಾಯಿ
ಪಂದ್ಯ ಮುಗಿದ ಬಳಿಕ ರೋಶಿಬಿನಾ ದೇವಿ ಅವರ ತಾಯಿ ಮಾಧ್ಯಮಗಳೊಂದಿಗೆ ಮಾತನಾಡಿ ಭಾವುಕರಾಗಿದ್ದಾರೆ. ʼಮಗಳು ಜಪಾನ್ಗೆ ಹೊರಡುವಾಗಲೇ ಆಕೆಗೆ ತೀವ್ರ ಫ್ಲೂ ಜ್ವರ ಇತ್ತು. ದೇಹದಲ್ಲಿ ಅಷ್ಟೊಂದು ಸುಸ್ತಿದ್ದರೂ ಅವಳು ಎಲ್ಲೂ ಧೃತಿಗೆಡದೆ ದೇಶಕ್ಕಾಗಿ ಕಣಕ್ಕಿಳಿದು ಬೆಳ್ಳಿ ಗೆದ್ದಿದ್ದಾಳೆ. ಆಕೆಯ ಈ ದೃಢ ಸಂಕಲ್ಪಕ್ಕೆ ನನ್ನ ನಮನಗಳುʼ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಭಾರತದ ಪದಕಗಳ ಸಂಖ್ಯೆ 14ಕ್ಕೆ ಏರಿಕೆ
ರೋಶಿಬಿನಾ ಅವರ ಈ ಬೆಳ್ಳಿಯೊಂದಿಗೆ ಪ್ರಸಕ್ತ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 14ಕ್ಕೆ ತಲುಪಿದೆ. ಇದರಲ್ಲಿ ಭಾರತ 1 ಚಿನ್ನ, 6 ಬೆಳ್ಳಿ ಹಾಗೂ 7 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇಂದು ಮುಂಜಾನೆ ನಡೆದ ರೋಯಿಂಗ್ ಪುರುಷರ ಡಬಲ್ ಸ್ಕಲ್ಸ್ ಫೈನಲ್ನಲ್ಲಿ ಸತ್ನಾಮ್ ಸಿಂಗ್ ಮತ್ತು ಸಲ್ಮಾನ್ ಖಾನ್ ಜೋಡಿ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದೆ. ಆದರೆ, ಸಿಂಗಲ್ಸ್ ಸ್ಕಲ್ಸ್ನಲ್ಲಿ ಭಾರತದ ಬಲರಾಜ್ ಪನ್ವಾರ್ ಸ್ವಲ್ಪದರಲ್ಲೇ ಪದಕ ಮಿಸ್ ಮಾಡಿಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.



