ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದ್ದ ‘ಆಯುಷ್ಮಾನ್ ಭಾರತ್’ ಯೋಜನೆ ಇಂದಿಗೆ ಯಶಸ್ವಿಯಾಗಿ 8 ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಕೋಟ್ಯಂತರ ಕುಟುಂಬಗಳು ಆಸ್ಪತ್ರೆಯ ಭಾರಿ ವೆಚ್ಚದ ಭೀತಿಯಿಂದ ಮುಕ್ತಿ ಪಡೆದಿದ್ದು, ದೇಶದ ಹೆಮ್ಮೆಯ ಯೋಜನೆಯ ಅಸಲಿ ಸಾಧನೆಯ ಅಂಕಿ-ಅಂಶಗಳು ಹೊರಬಿದ್ದಿವೆ.
ಈ ಐತಿಹಾಸಿಕ ಮೈಲಿಗಲ್ಲಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ʼಆಯುಷ್ಮಾನ್ ಭಾರತ್ ಕೋಟ್ಯಂತರ ಜನರ ಬದುಕಿನಲ್ಲಿ ಭರವಸೆಯ ಬೆಳಕಾಗಿದೆ. ದೇಶದ 60 ಕೋಟಿಗೂ ಅಧಿಕ ಜನರಿಗೆ ವಾರ್ಷಿಕ 5 ಲಕ್ಷ ರೂ.ಗಳ ಉಚಿತ ಆರೋಗ್ಯ ಕವರೇಜ್ ಒದಗಿಸುವ ಮೂಲಕ ಬಡವರ ಜೇಬಿನ ಹಣ ಉಳಿತಾಯವಾಗುವಂತೆ ಮಾಡಿದೆʼ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
2 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಉಚಿತ ಚಿಕಿತ್ಸೆ
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಹಂಚಿಕೊಂಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಈ ಯೋಜನೆಯಡಿ ಇಡೀ ದೇಶದಲ್ಲಿ ಇದುವರೆಗೆ ಬರೋಬ್ಬರಿ 48.5 ಕೋಟಿಗೂ ಅಧಿಕ ಡಿಜಿಟಲ್ ಹೆಲ್ತ್ ಕಾರ್ಡ್‌ಗಳನ್ನು ಮಾಡಲಾಗಿದೆ. ದೇಶಾದ್ಯಂತ ಇರುವ 39,000ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಮೂಲಕ ಸುಮಾರು 13 ಕೋಟಿಗಿಂತಲೂ ಹೆಚ್ಚು ಜನರು 2 ಲಕ್ಷ ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಉಚಿತ ಚಿಕಿತ್ಸೆಯನ್ನು ಪಡೆದುಕೊಂಡು ಮರುಜೀವ ಪಡೆದಿದ್ದಾರೆ.
ಇದನ್ನೂ ಓದಿ:
ಕೇವಲ ದೊಡ್ಡ ಆಸ್ಪತ್ರೆಗಳು ಮಾತ್ರವಲ್ಲದೆ, ಹಳ್ಳಿ ಹಳ್ಳಿಗಳ ತಳಮಟ್ಟದಲ್ಲಿ ಜನರಿಗೆ ಹತ್ತಿರವಾಗಿ ಚಿಕಿತ್ಸೆ ನೀಡಲು ಆರಂಭಿಸಲಾಗಿರುವ ‘ಆಯುಷ್ಮಾನ್ ಆರೋಗ್ಯ ಮಂದಿರ’ಗಳಿಗೆ ಸಾರ್ವಜನಿಕರು ಬರೋಬ್ಬರಿ 500 ಕೋಟಿಗೂ ಅಧಿಕ ಬಾರಿ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆರೋಗ್ಯ ಭದ್ರತೆ ನೀಡುವ ಸರ್ಕಾರದ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ.



