ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಾಮಾಜಿಕ ಜಾಲತಾಣಗಳಲ್ಲಿ ಯೋಜನೆ ರೂಪಿಸುತ್ತಿದ್ದ ಆರೋಪದ ಮೇಲೆ ಚಿಕ್ಕಬಳ್ಳಾಪುರ ಮೂಲದ ಶಬ್ಬೀರ್ ಹಾಗೂ ಉತ್ತರ ಭಾರತ ಮೂಲದ ಸಲ್ಮಾನ್ ಎಂಬಾತನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಚೋದನಕಾರಿ ವಿಡಿಯೋಗಳೇ ಈ ಸಂಚಿಗೆ ಪ್ರೇರಣೆ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಆರೋಪಿಗಳು ಟೆಲಿಗ್ರಾಂನಲ್ಲಿ ಕೇವಲ 8 ಜನರಿರುವ ರಹಸ್ಯ ಗ್ರೂಪ್ ಒಂದನ್ನು ಮಾಡಿಕೊಂಡಿದ್ದರು. ಇಂಟರ್ನೆಟ್‌ನಲ್ಲಿ ಸಿಗುವ ಪ್ರಚೋದನಕಾರಿ ಹಾಗೂ ಸಮಾಜದ ಶಾಂತಿ ಕೆಡಿಸುವ ವಿಡಿಯೋಗಳನ್ನು ನೋಡಿ ಪ್ರೇರಿತರಾಗಿದ್ದ ಇವರು, ಆ ಗ್ರೂಪ್‌ನಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಹೇಗೆ ನಡೆಸಬೇಕು ಮತ್ತು ದೇಶದಲ್ಲಿ ಅರಾಜಕತೆ ಹೇಗೆ ಸೃಷ್ಟಿಸಬೇಕು ಎಂಬುದರ ಬಗ್ಗೆ ನಿರಂತರವಾಗಿ ಚರ್ಚೆಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.
ಬಂಧಿತರಿಗೆ ಸದ್ಯಕ್ಕೆ ಉಗ್ರ ಹಿನ್ನೆಲೆ ಇಲ್ಲ: ಎಸ್ಪಿ ಸ್ಪಷ್ಟನೆ
ಈ ಪ್ರಕರಣದ ಕುರಿತು ಮಾತನಾಡಿರುವ ಚಿಕ್ಕಬಳ್ಳಾಪುರ ಎಸ್‌ಪಿ ಪದ್ಮಿನಿ ಸಾಹೂ ಅವರು, ಟೆಲಿಗ್ರಾಂ ಚಾಟ್‌ಗಳಲ್ಲಿ ಭಯೋತ್ಪಾದನೆ ಕುರಿತು ಮಾತನಾಡುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂಬುದು ನಿಜ. ಆದರೆ ಸದ್ಯದ ನಮ್ಮ ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಇಬ್ಬರು ಆರೋಪಿಗಳಿಗೂ ಯಾವುದೇ ಹಳೆಯ ಭಯೋತ್ಪಾದನಾ ಹಿನ್ನೆಲೆ ಇರುವುದು ಕಂಡುಬಂದಿಲ್ಲ. ಆದರೂ ನಾವು ಇದನ್ನು ಲಘುವಾಗಿ ಪರಿಗಣಿಸಿಲ್ಲ, ನಮ್ಮ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಗ್ರೂಪ್‌ನ ಉಳಿದ 6 ಜನರ ಬೇಟೆಗೆ ಪ್ಲ್ಯಾನ್
ಸದ್ಯ ಬಂಧಿತ ಶಬ್ಬೀರ್ ಮತ್ತು ಸಲ್ಮಾನ್ ಇಬ್ಬರನ್ನೂ ಕೋರ್ಟ್ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ, ಪ್ರಕರಣದ ಆಳ ಮತ್ತು ಅವರ ಮೊಬೈಲ್ ಚಾಟ್‌ಗಳ ಇತಿಹಾಸವನ್ನು ಸಂಪೂರ್ಣವಾಗಿ ಕೆದಕಲು ಪೊಲೀಸರು ಸಜ್ಜಾಗಿದ್ದಾರೆ. ʼಈಗಾಗಲೇ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ಕೇಸ್ ದಾಖಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ನಮ್ಮ ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಿದ್ದೇವೆ. ಆ ಟೆಲಿಗ್ರಾಂ ಗ್ರೂಪ್‌ನಲ್ಲಿದ್ದ ಉಳಿದ ಆರು ಜನ ಯಾರು ಮತ್ತು ಅವರ ಸಂಪರ್ಕ ಎಲ್ಲೆಲ್ಲಿದೆ ಎಂಬುದನ್ನು ಪತ್ತೆಹಚ್ಚಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.



