November 23, 2026
Monday, November 23, 2026
spot_img

ಕೋವಿಡ್ ನಿಯಮಕ್ಕೆ ಇನ್ನೂ ಯಾಕೆ ಮಣೆ?: ಚೆಂಡಿಗೆ ಉಗುಳು ಹಚ್ಚುವು ನಿಷೇಧ ತೆರವುಗೊಳಿಸಲು ಶುಭ್‌ಮನ್ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಪ್ರಾಬಲ್ಯ ಹೆಚ್ಚುತ್ತಿರುವ ಬೆನ್ನಲ್ಲೇ ಬೌಲರ್‌ಗಳಿಗೆ ನೆರವಾಗುವ ನಿಯಮಗಳ ಬದಲಾವಣೆಯ ಅಗತ್ಯದ ಬಗ್ಗೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಚೆಂಡನ್ನು ಹೊಳಪು ಮಾಡಲು ಎಂಜಲು ಬಳಸುವ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಭಾರತ ತಂಡದ ನಾಯಕ ಶುಭ್‌ಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಆಗ್ರಹಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020ರ ಮಧ್ಯಭಾಗದಲ್ಲಿ ಚೆಂಡಿಗೆ ಎಂಜಲು ಬಳಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಬಳಿಕ ವೈದ್ಯಕೀಯ ಸಲಹೆಯ ಮೇರೆಗೆ 2022ರಲ್ಲಿ ಈ ನಿಯಮವನ್ನು ಶಾಶ್ವತಗೊಳಿಸಲಾಯಿತು. ಆದರೆ, ಚೆಂಡಿಗೆ ಬೆವರು ಬಳಸಲು ಮಾತ್ರ ಅವಕಾಶ ಮುಂದುವರಿಸಲಾಗಿದೆ.

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಿಚ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿಲ್ಲ. ಐದನೇ ದಿನವೂ ಚೆಂಡಿನ ಹೊಳಪು ಹಾಗೂ ಸ್ವಿಂಗ್ ಕಾಯ್ದುಕೊಳ್ಳುವುದು ಕಷ್ಟವಾಗಿದ್ದ ಹಿನ್ನೆಲೆಯಲ್ಲಿ ಬೌಲರ್‌ಗಳ ಕೆಲಸ ಮತ್ತಷ್ಟು ಕಠಿಣವಾಗಿತ್ತು. ಇದೇ ವಿಚಾರವಾಗಿ ಮಾತನಾಡಿದ ಗಿಲ್, ಕೋವಿಡ್ ಸಮಯದಲ್ಲಿ ಜಾರಿಗೆ ತಂದ ನಿಯಮವನ್ನು ಈಗಲೂ ಮುಂದುವರಿಸುವ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:

ಚೆಂಡನ್ನು ಹೊಳಪು ಮಾಡಲು ಎಂಜಲು ಬಳಸಲು ಆಟಗಾರರಿಗೆ ಅವಕಾಶ ನೀಡಬೇಕು. ಕೋವಿಡ್ ಸಂದರ್ಭದಲ್ಲಿ ಈ ನಿಯಮ ಜಾರಿಗೆ ಬಂದಿತ್ತು. ಆದರೆ, ಈಗ ನಾವು ಆ ಪರಿಸ್ಥಿತಿಯಿಂದ ಬಹಳ ದೂರ ಬಂದಿದ್ದೇವೆ. ಈ ನಿಷೇಧ ಇನ್ನೂ ಏಕೆ ಮುಂದುವರಿದಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ, ಎಂದು ಗಿಲ್ ಹೇಳಿದ್ದಾರೆ.

ಈ ಟೆಸ್ಟ್‌ನಲ್ಲಿ ಒಟ್ಟು 24 ವಿಕೆಟ್‌ಗಳು ಮಾತ್ರ ಪತನಗೊಂಡಿದ್ದವು. ಭಾರತ 720 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ತನ್ನ ಇತಿಹಾಸದ ಮೂರನೇ ಅತಿ ದೊಡ್ಡ ಟೆಸ್ಟ್ ಮೊತ್ತ ದಾಖಲಿಸಿತ್ತು. ಕೊನೆಯ ದಿನ ಎಂಟು ವಿಕೆಟ್ ಪಡೆದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಅವಕಾಶವಿದ್ದರೂ, ನ್ಯೂಜಿಲೆಂಡ್ 239 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಡ್ರಾ ಮಾಡಿಕೊಂಡಿತು.

Must Read