ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವನ್ನು ಜಾಗತಿಕ ಉತ್ಪಾದನೆಯ ಕೇಂದ್ರವನ್ನಾಗಿ ರೂಪಿಸುವ ಮತ್ತು ಸ್ವದೇಶಿ ನಿರ್ಮಾಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದ್ದ ಕೇಂದ್ರ ಸರ್ಕಾರದ ಮಹತ್ತರ ಅಭಿಯಾನ ‘ಮೇಕ್ ಇನ್ ಇಂಡಿಯಾ’ ಇಂದಿಗೆ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿದೆ. 2014ರ ಸೆ. 25ರಂದು ಆರಂಭವಾಗಿದ್ದ ಈ ಐತಿಹಾಸಿಕ ನಡೆ, ದೇಶದ ಉದ್ಯಮ ರಂಗದ ಇತಿಹಾಸದಲ್ಲೇ ಮಹತ್ತರ ಕ್ರಾಂತಿಗೆ ಕಾರಣವಾಗಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ʼಭಾರತದಲ್ಲೇ ಹೆಚ್ಚಿನ ಉತ್ಪಾದನೆ, ಭಾರತದಲ್ಲಿ ಗರಿಷ್ಠ ಹೂಡಿಕೆ ಮತ್ತು ಭಾರತದಿಂದ ಜಗತ್ತಿಗೆ ಭರ್ಜರಿ ರಫ್ತು. ಇಂದು ದೇಶದ ಪ್ರತಿಯೊಂದು ವಲಯದಲ್ಲೂ ಈ ಮಹತ್ತರ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತಿದೆʼ ಎಂದು ಕೊಂಡಾಡಿದ್ದಾರೆ.
ಭಾರತೀಯರಲ್ಲಿ ಆತ್ಮವಿಶ್ವಾಸ ಮೂಡಿದೆ
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಈ ಮೈಲಿಗಲ್ಲನ್ನು ಶ್ಲಾಘಿಸಿ, ʼಭಾರತವು ಕೇವಲ ತನ್ನ ದೇಶದ ಆಂತರಿಕ ಮಾರುಕಟ್ಟೆಗಾಗಿ ವಸ್ತುಗಳನ್ನು ತಯಾರಿಸುವ ಕಾಲದಿಂದ, ಇಡೀ ಜಗತ್ತಿನ ಮಾರುಕಟ್ಟೆಗೇ ರಫ್ತು ಮಾಡುವ ಹಂತಕ್ಕೆ ಬೆಳೆದು ನಿಂತಿದೆ. ಇದು ಬರೀ ಅಂಕಿ-ಅಂಶಗಳ ಸಾಧನೆಯಲ್ಲ. ನಮ್ಮ ದೇಶದ ನವೋದ್ಯಮಿಗಳು, ಹೊಸ ಆವಿಷ್ಕಾರಕರು, ರಫ್ತುದಾರರು ಮತ್ತು ಮುಖ್ಯವಾಗಿ ಜನಸಾಮಾನ್ಯರಲ್ಲಿ ‘ನಾವು ಜಗತ್ತಿನೊಂದಿಗೆ ನೇರವಾಗಿ ಸ್ಪರ್ಧಿಸಬಲ್ಲೆವು’ ಎಂಬ ಆತ್ಮವಿಶ್ವಾಸವನ್ನು ಈ ಯೋಜನೆ ಮೂಡಿಸಿದೆʼ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
12ವರ್ಷಗಳ ಸಾಧನೆಯ ರಿಪೋರ್ಟ್ ಕಾರ್ಡ್
ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ ಯೋಜನೆಗಳ ಮೂಲಕ ದೇಶಕ್ಕೆ ಬರೋಬ್ಬರಿ 2.40 ಲಕ್ಷ ಕೋಟಿ ರೂ. ನೈಜ ಹೂಡಿಕೆ ಹರಿದುಬಂದಿದೆ. ಇದರ ಫಲವಾಗಿ ಸುಮಾರು 14.6 ಲಕ್ಷಕ್ಕೂ ಅಧಿಕ ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಇನ್ನು, 2014ರಲ್ಲಿ ಕೇವಲ 1.9 ಲಕ್ಷ ಕೋಟಿ ರೂ.ಯಷ್ಟಿದ್ದ ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಇಂದು ಬರೋಬ್ಬರಿ 13.11 ಲಕ್ಷ ಕೋಟಿ ರೂ.ಗೆ ತಲುಪಿದೆ. ಅದೇ ರೀತಿ12 ವರ್ಷಗಳ ಹಿಂದೆ ಕೇವಲ 18,000 ಕೋಟಿ ರೂ.ಯಷ್ಟಿದ್ದ ದೇಶದ ಒಟ್ಟು ಮೊಬೈಲ್ ಫೋನ್ ಉತ್ಪಾದನೆ, ಇಂದು ಬರೋಬ್ಬರಿ 6.27 ಲಕ್ಷ ಕೋಟಿ ರೂ.ಗೆ ಜಿಗಿದು ಇಡೀ ಜಗತ್ತನ್ನೇ ಆಕರ್ಷಿಸುತ್ತಿದೆ.
ಇದನ್ನೂ ಓದಿ:
ಭಾರತದ ಈ ಉತ್ಪಾದನಾ ಸಾಮರ್ಥ್ಯವನ್ನು ಜಾಗತಿಕ ಪೂರೈಕೆ ಸರಪಳಿಯೊಂದಿಗೆ ಗಟ್ಟಿಯಾಗಿ ಬೆಸೆದಿದ್ದು, ಮುಂಬರುವ ದಿನಗಳಲ್ಲಿ ‘ವಿಕಸಿತ ಭಾರತ’ ನಿರ್ಮಾಣದ ಕನಸಿಗೆ ಮತ್ತಷ್ಟು ಆನೆಬಲ ತರಲಿದೆ.



