ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಲ್ಫ್, ಕೆಂಪು ಸಮುದ್ರ ಹಾಗೂ ಕಪ್ಪು ಸಮುದ್ರದ ಪ್ರಮುಖ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲೆ ಪದೇಪದೇ ನಡೆಯುತ್ತಿರುವ ದಾಳಿಗಳ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ನಡೆದಿರುವ ಘಟನೆಗಳು ಪ್ರತ್ಯೇಕ ಪ್ರಕರಣಗಳಾಗಿ ಉಳಿದಿಲ್ಲ, ಬದಲಾಗಿ ಜಾಗತಿಕ ವಾಣಿಜ್ಯ ಸಾಗಣೆಯ ಸುರಕ್ಷತೆಗೆ ಎದುರಾಗಿರುವ ಗಂಭೀರ ಸವಾಲಾಗಿ ಪರಿಣಮಿಸಿವೆ ಎಂದು ಅವರು ಹೇಳಿದ್ದಾರೆ.
ದಾಳಿಗಳನ್ನು ಸಮರ್ಥಿಸಲು ಸಾಧ್ಯವಿಲ್ಲ
81ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂಗವಾಗಿ ನಡೆದ ‘ಶಿಪ್ಪಿಂಗ್ ಮತ್ತು ಸೀಫೇರರ್ಸ್ ಸುರಕ್ಷತೆ ಮತ್ತು ಭದ್ರತೆ’ ಕುರಿತ ‘ಗ್ರೂಪ್ ಆಫ್ ಫ್ರೆಂಡ್ಸ್’ ಸಭೆಯಲ್ಲಿ ಮಾತನಾಡಿದ ಜೈಶಂಕರ್, ವಾಣಿಜ್ಯ ಹಡಗುಗಳ ಮೇಲಿನ ದಾಳಿಯಿಂದ ಅಮಾಯಕ ಜೀವಗಳು ಬಲಿಯಾಗುತ್ತಿದ್ದು, ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಓಮನ್ ಕೊಲ್ಲಿಯಲ್ಲಿ ಆಂಟಿಗುವಾ ಮತ್ತು ಬಾರ್ಬುಡಾ ಧ್ವಜ ಹೊಂದಿದ್ದ MV Cape Dao ಹೆಸರಿನ ಬಲ್ಕ್ ಕ್ಯಾರಿಯರ್ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ನಾವಿಕ ಮೃತಪಟ್ಟಿರುವುದನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು. ಅದಕ್ಕೂ ಮುನ್ನ ಪನಾಮಾ ಧ್ವಜದ ತೈಲ ಸಾಗಣೆ ಹಡಗು El Gaia ಸ್ಟ್ರೈಟ್ ಆಫ್ ಹಾರ್ಮುಜ್‌ನಲ್ಲಿ ದಾಳಿಗೆ ಒಳಗಾಗಿದ್ದು, ಭಾರತೀಯ ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಜೈಶಂಕರ್ ತಿಳಿಸಿದರು.
ಇದನ್ನೂ ಓದಿ:
ಕಪ್ಪು ಸಮುದ್ರದಲ್ಲಿಯೂ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿರುವುದನ್ನು ಅವರು ಪ್ರಸ್ತಾಪಿಸಿದರು. ಜುಲೈ 18ರಂದು ರಷ್ಯಾದ ಪ್ರಾದೇಶಿಕ ಜಲಪ್ರದೇಶದಲ್ಲಿ MV Omorfi ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಮುಖ್ಯ ಅಧಿಕಾರಿ ಮೃತಪಟ್ಟಿದ್ದು, ಮರುದಿನ ಒಡೆಸಾ ಬಂದರಿನಿಂದ ಹೊರಟಿದ್ದ MV Golden Leo ಮೇಲೆ ದಾಳಿ ನಡೆದ ಪರಿಣಾಮ ನಾಲ್ವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ ಎಂದು ಹೇಳಿದರು.
ಏನಿದು ‘ಗ್ರೂಪ್ ಆಫ್ ಫ್ರೆಂಡ್ಸ್’
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಲೈಬೀರಿಯಾ ಜಂಟಿಯಾಗಿ ‘ಗ್ರೂಪ್ ಆಫ್ ಫ್ರೆಂಡ್ಸ್’ ವೇದಿಕೆಯನ್ನು ರೂಪಿಸಿದ್ದು, ಹಡಗುಗಳು ಹಾಗೂ ನಾವಿಕರ ಸುರಕ್ಷತೆ ಕುರಿತು ರಾಷ್ಟ್ರಗಳ ನಡುವೆ ಸಮನ್ವಯ ಹೆಚ್ಚಿಸುವ ಉದ್ದೇಶ ಹೊಂದಿದೆ. ನಾವಿಕರ ದೀರ್ಘಕಾಲದ ಬಂಧನ, ಸಿಬ್ಬಂದಿ ಬದಲಾವಣೆಯಲ್ಲಿ ವಿಳಂಬ, ಸ್ವದೇಶಕ್ಕೆ ವಾಪಸಾತಿ ಸಮಸ್ಯೆ ಹಾಗೂ ಕುಟುಂಬಗಳಿಂದ ದೂರ ಉಳಿಯುವಂತಹ ಸವಾಲುಗಳನ್ನೂ ಜೈಶಂಕರ್ ಪ್ರಸ್ತಾಪಿಸಿದರು.



