ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹೊರವಲಯದ ಜನರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಒಂಟಿ ಸಲಗವನ್ನು ಮರಳಿ ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಾರ್ಮಿಕನೊಬ್ಬನನ್ನು ಬಲಿಪಡೆದಿದ್ದ ಈ ಕಾಡಾನೆಯನ್ನು, ನೂರಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಯಶಸ್ವಿಯಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮೀಸಲು ಅರಣ್ಯಕ್ಕೆ ಹಿಮ್ಮೆಟ್ಟಿಸಲಾಗಿದೆ.
ರಾತ್ರಿಯಿಡೀ ನಡೆದ ಕಾರ್ಯಾಚರಣೆ
ವ್ಯಕ್ತಿಯ ಸಾವಿಗೆ ಕಾರಣವಾದ ನಂತರ ಈ ಕಾಡಾನೆಯು ಬೆಂಗಳೂರು ಹೊರವಲಯದ ಬಿಎಂ ಕಾವಲು ಮೀಸಲು ಅರಣ್ಯ ಪ್ರದೇಶದಲ್ಲಿ ಯಾರಿಗೂ ಕಾಣಿಸದಂತೆ ಅಡಗಿ ಕುಳಿತಿತ್ತು. ದಟ್ಟ ಕತ್ತಲಲ್ಲಿ ಆನೆಯ ನಿಖರವಾದ ಜಾಗವನ್ನು ಪತ್ತೆಹಚ್ಚುವುದು ಸಿಬ್ಬಂದಿಗೆ ದೊಡ್ಡ ಸವಾಲಾಗಿತ್ತು. ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಡಿಸಿಎಫ್ ಚಕ್ರಪಾಣಿ ಅವರ ತಂಡವು 2 ಥರ್ಮಲ್ ಡ್ರೋನ್ಗಳಮೂಲಕ ಆನೆ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಿದರು.
ಇದನ್ನೂ ಓದಿ:
ಬನ್ನೇರುಘಟ್ಟ ಅರಣ್ಯ ಸೇರಿದ ಸಲಗ
ಆನೆಯ ನಿಖರವಾದ ಜಾಡು ಸಿಗುತ್ತಿದ್ದಂತೆ ಅರಣ್ಯ ಇಲಾಖೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಗೆ ಧಾವಿಸಿದರು. ಎಲಿಫೆಂಟ್ ಕಾರಿಡಾರ್ ಮೂಲಕ ಆನೆಯನ್ನು ಯಶಸ್ವಿಯಾಗಿ ಬನ್ನೇರುಘಟ್ಟದ ಅರಣ್ಯದೊಳಗೆ ಸೇರಿಸಲಾಯಿತು.
ಸದ್ಯ ಆನೆ ಕಾಡು ಸೇರಿರುವುದರಿಂದ ಬೆಂಗಳೂರು ಹೊರವಲಯದ ಸುತ್ತಮುತ್ತಲಿನ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಗಡಿ ಭಾಗದಲ್ಲಿ ಇನ್ನೂ ಕೆಲವು ಸಿಬ್ಬಂದಿ ನಿಗಾ ಇರಿಸಿದ್ದಾರೆ.



