ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾಗಿ ನಾಲ್ಕೇ ತಿಂಗಳಲ್ಲಿ ಐಟಿ ಎಂಜಿನಿಯರ್ ಮಹಿಳೆಯೊಬ್ಬರು ಪುಣೆಯ ವಡಾಚಿವಾಡಿ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಕಾರು ಖರೀದಿಸಲು ತವರು ಮನೆಯಿಂದ 5 ಲಕ್ಷ ತರಬೇಕೆಂದು ಪತಿ ಹಾಗೂ ಅತ್ತೆ-ಮಾವ ಒತ್ತಡ ಹೇರುತ್ತಿದ್ದರು. ಈ ವಿಚಾರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತೆಯನ್ನು ವೈಷ್ಣವಿ ಓಂಕಾರ್ ಗಿಸರೆ ಎಂದು ಗುರುತಿಸಲಾಗಿದೆ. ಮೇ 9ರಂದು ಓಂಕಾರ್ ಸಂಜಯ್ ಗಿಸರೆ ಅವರನ್ನು ವಿವಾಹವಾಗಿದ್ದ ವೈಷ್ಣವಿ, ಆರಂಭದಲ್ಲಿ ಪತಿ ಹಾಗೂ ಅತ್ತೆ-ಮಾವನೊಂದಿಗೆ ವಾಸಿಸುತ್ತಿದ್ದರು. ಬಳಿಕ ಉದ್ಯೋಗದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದ ಅವರು ಜೂನ್ ಅಂತ್ಯದ ವೇಳೆಗೆ ಪುಣೆಗೆ ಮರಳಿ ಮನೆಯಿಂದಲೇ ಐಟಿ ಕಂಪನಿಯ ಕೆಲಸ ನಿರ್ವಹಿಸುತ್ತಿದ್ದರು ಎಂದು ಕುಟುಂಬದ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:
ವೈಷ್ಣವಿ ಕುಟುಂಬದ ಪ್ರಕಾರ, ವಿವಾಹದ ಸಂದರ್ಭದಲ್ಲಿ ಸುಮಾರು 45 ಲಕ್ಷ ಖರ್ಚು ಮಾಡಲಾಗಿತ್ತು. ಅಲ್ಲದೆ 10 ತೊಲೆ ಚಿನ್ನವನ್ನು ನೀಡಲಾಗಿತ್ತು. ಆದರೆ ಮದುವೆಯ ಬಳಿಕ ಕಾರ್ ಖರೀದಿಸಲು ಹೆಚ್ಚುವರಿಯಾಗಿ 5 ಲಕ್ಷ ತರುವಂತೆ ಒತ್ತಡ ಹಾಕಲಾಗುತ್ತಿತ್ತು. ಹಣದ ಬೇಡಿಕೆಯನ್ನು ಮುಂದಿಟ್ಟುಕೊಂಡು ಪತಿ ಹಾಗೂ ಅತ್ತೆ-ಮಾವ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ತಂದೆ ಪ್ರವೀಣ್ ರಘುನಾಥ್ ಜರಾಂಡೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಏನಿದು ಘಟನೆ?
ಸೆ.24ರ ರಾತ್ರಿ ವೈಷ್ಣವಿ ತನ್ನ ತಾಯಿಗೆ ಕರೆ ಮಾಡಿ ಪತಿಯ ಮನೆಯಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳ ಕುರಿತು ತಿಳಿಸಿದ್ದರೆಂದು ಕುಟುಂಬಸ್ಥರು ಹೇಳಿದ್ದಾರೆ. ಬಳಿಕ ರಾತ್ರಿ ಸುಮಾರು 11.30ರ ವೇಳೆಗೆ ಪತಿಯೂ ಆಕೆಯ ಕುಟುಂಬಕ್ಕೆ ಕರೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ವೈಷ್ಣವಿಯನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪುಣೆಗೆ ತೆರಳಿದ್ದು, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದು ತಿಳಿದುಬಂದಿದೆ.
ವೈಷ್ಣವಿ ತಂದೆಯ ದೂರಿನ ಆಧಾರದ ಮೇಲೆ ಕಾಲೇಪಾಡಳ ಪೊಲೀಸರು ಪತಿ ಓಂಕಾರ್ ಸಂಜಯ್ ಗಿಸರೆ, ಮಾವ ಸಂಜಯ್ ಮಹಾದೇವ್ ಗಿಸರೆ ಹಾಗೂ ಅತ್ತೆ ರೂಪಾಲಿ ಸಂಜಯ್ ಗಿಸರೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆಗೆ ಸಂಬಂಧಿಸಿದ ಕಾನೂನು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಗಳು ತನಿಖೆಯಲ್ಲಿದ್ದು, ನ್ಯಾಯಾಲಯದಲ್ಲಿ ಇನ್ನೂ ಸಾಬೀತಾಗಿಲ್ಲ.



