ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ಸೈಟ್‌ಗಳ ಕ್ಲೀನಿಂಗ್ ಡ್ರೈವ್ ನಡೆಯುತ್ತಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯ ಕಾಪಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತ್ಯಾಜ್ಯ ಮುಕ್ತ ಅಭಿಯಾನದಡಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕಳೆದ ಎರಡು ತಿಂಗಳಿನಲ್ಲಿ ಬರೋಬ್ಬರಿ 709 ನಿವೇಶನಗಳನ್ನು ಸ್ವಚ್ಛಗೊಳಿಸಿದೆ.
ವಸತಿ ಬಡಾವಣೆಗಳಲ್ಲಿ ಖಾಲಿ ಇದ್ದ ಸೈಟ್‌ಗಳಲ್ಲಿ ಜನ ಕಸ ಹಾಕುವುದನ್ನು ಆರಂಭಿಸಿದ್ದರು. ಇದರಿಂದಾಗಿ ಸೊಳ್ಳೆಗಳು ಅತಿಯಾಗಿದ್ದವು. ನಿವೇಶನಗಳನ್ನು ಖರೀದಿ ಮಾಡಿ ಹಾಗೇ ಬಿಟ್ಟುಬಿಟ್ಟರೆ ಜನ ಅದನ್ನು ಕಸದ ಗುಂಡಿಯನ್ನಾಗಿ ಪರಿವರ್ತಿಸುತ್ತಾರೆ. ಕಸ ಹಾಕುವವರಿಗೂ ದಂಡ ವಿಧಿಸಲಾಗುತ್ತದೆ. ಹಾಗೇ ಈಗಾಗಲೇ ಗಲೀಜಾಗಿರುವ ಸೈಟ್‌ಗಳನ್ನು ಮಾಲೀಕರು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು.
ಸ್ವಚ್ಛತೆ ಕಾಪಾಡಿಕೊಳ್ಳಲು ವಿಫಲವಾಗುವ ನಿವೇಶನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. 533 ಖಾಲಿ ನಿವೇಶನಗಳ ಮಾಲೀಕರ ವಿರುದ್ಧ ಪಾಲಿಕೆ ಕಠಿಣ ಕ್ರಮ ಆರಂಭಿಸಿದ್ದು, ಈವರೆಗೆ 372 ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಜನರು ಕಸ ಹಾಕುವುದನ್ನು ತಡೆಯಲು ಕಾಂಪೌಂಡ್ ಅಥವಾ ತಂತಿ ಬೇಲಿಯನ್ನು ಮಾಲೀಕರು ಹಾಕಿಸಬೇಕು. ತಿಂಗಳಿಗೊಮ್ಮೆ ಸೈಟ್‌ನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಕ್ಲೀನ್ ಆಗಿರುವ ಸೈಟ್ ಕ್ಲೀನ್ ಆಗಿಯೇ ಇರಬೇಕು. ಸೈಟ್ ಖಾಲಿ ಎಂದ ತಕ್ಷಣ ಕಸದ ತೊಟ್ಟಿಯಂತೆ ಕಾಣುವುದನ್ನು ಜನರು ಕೂಡ ನಿಲ್ಲಿಸಬೇಕು ಎಂದು ಜಿಬಿಎ ಹೇಳಿದೆ.



