October 7, 2026
Wednesday, October 7, 2026
spot_img

ದೆಹಲಿಯಲ್ಲಿ ಮತ್ತೊಂದು ಕಟ್ಟಡ ಕುಸಿತ: ಮಗು ಸಾ*ವು, ಹಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯ ಸತ್ಯನಿಕೇತನದ ಕಟ್ಟಡ ದುರಂತ ನಡೆದು ಕೇವಲ ಒಂದು ತಿಂಗಳು ಕಳೆಯುವ ಮುನ್ನವೇ, ರಾಜಧಾನಿಯಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ. ಈಶಾನ್ಯ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ನಾಲ್ಕು ಮಹಡಿಯ ಕಟ್ಟಡವೊಂದು ಹಠಾತ್ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಮಗುವೊಂದು ದಾರುಣವಾಗಿ ಮೃತಪಟ್ಟಿದೆ. ಕನಿಷ್ಠ ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಲುಕಿರುವ ಆತಂಕ ಎದುರಾಗಿದೆ.

ಹಠಾತ್ ಕುಸಿದ ಕಟ್ಟಡ

ಬುಧವಾರ ಮಧ್ಯಾಹ್ನ ಸುಮಾರು 3:30 ರ ಸುಮಾರಿಗೆ ಸೀಮಾಪುರಿಯ ಮೀನು ಮಾರುಕಟ್ಟೆಯ ಹಿಂಭಾಗದಲ್ಲಿರುವ ಈ ಹಳೆಯ ವಸತಿ ಕಟ್ಟಡವು ಧರೆಗುರುಳಿದೆ. ಕಟ್ಟಡ ಕುಸಿಯುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಕಿರುಚಾಟ, ಆಕ್ರಂದನ ಮುಗಿಲುಮುಟ್ಟಿತ್ತು. ಮಾಹಿತಿ ತಿಳಿದ ತಕ್ಷಣವೇ ದೆಹಲಿ ಅಗ್ನಿಶಾಮಕ ದಳ, ಪೊಲೀಸರು ಮತ್ತು ಮುನ್ಸಿಪಲ್ ಕಾರ್ಪೊರೇಷನ್ (MCD) ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ

ಸ್ಥಳಕ್ಕೆ ಬಂದ ಅಧಿಕಾರಿಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಇದುವರೆಗೆ ಅವಶೇಷಗಳ ಅಡಿಯಲ್ಲಿದ್ದ 7 ಜನರನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಅದೃಷ್ಟವಶಾತ್ ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶಹದಾರ ಡಿಸಿಪಿ ರಾಜೇಂದ್ರ ಪ್ರಸಾದ್ ಮೀನಾ ತಿಳಿಸಿದ್ದಾರೆ. ಆದರೆ, ಇನ್ನೂ ಸುಮಾರು ಐದಕ್ಕೂ ಹೆಚ್ಚು ಜನರು ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದ್ದು, ನಾಲ್ಕು ಅಗ್ನಿಶಾಮಕ ವಾಹನಗಳು ಹಾಗೂ ಜೆಸಿಬಿಗಳ ಮೂಲಕ ಕಲ್ಲು-ಮಣ್ಣುಗಳನ್ನು ಸರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಇದನ್ನೂ ಓದಿ:

ಒಂದು ತಿಂಗಳಲ್ಲೇ ಎರಡನೇ ದುರಂತ

ಕಳೆದ ತಿಂಗಳಷ್ಟೇ ದೆಹಲಿಯ ಸತ್ಯನಿಕೇತನ ಪ್ರದೇಶದಲ್ಲಿ ದುರಸ್ತಿ ಕಾರ್ಯದ ವೇಳೆ ಕಟ್ಟಡವೊಂದು ಕುಸಿದು ಬಿದ್ದು ಏಳು ಜನರು ಸಾವನ್ನಪ್ಪಿದ್ದರು. ಆ ಘಟನೆಯ ಬೆನ್ನಲ್ಲೇ ದೆಹಲಿ ಸರ್ಕಾರವು ಇಂತಹ ಅಪಾಯಕಾರಿ ಕಟ್ಟಡಗಳ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಆದರೂ ಇಂತಹ ಹಳೆಯ ಮತ್ತು ಅಸುರಕ್ಷಿತ ಕಟ್ಟಡಗಳು ಇಂದಿಗೂ ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿರುವುದು ನಾಗರಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Must Read