ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಅಕ್ರಮ ಕಂಟೆಂಟ್ ವಿರುದ್ಧ ಮೆಟಾ ಯುದ್ಧ ಸಾರಿದ್ದು, ತನ್ನ ಕ್ರಮಗಳನ್ನು ಮತ್ತಷ್ಟು ಬಲಪಡಿಸಿದೆ.
53 ಲಕ್ಷಕ್ಕೂ ಹೆಚ್ಚು ಕಂಟೆಂಟ್
2026ರ ಮೊದಲ ಆರು ತಿಂಗಳಲ್ಲಿ ಭಾರತದಲ್ಲಿ 53 ಲಕ್ಷಕ್ಕೂ ಹೆಚ್ಚು ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಂಟೆಂಟ್‌ಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಸಂಸ್ಥೆ ತಿಳಿಸಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಜನವರಿಯಿಂದ ಜೂನ್‌ವರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೆಟಾ ಹೇಳಿದೆ.
ಮೆಟಾ ಮಾಹಿತಿಯಲ್ಲೇನಿದೆ?
ಮೆಟಾ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಪತ್ತೆಯಾದ ಇಂತಹ ಕಂಟೆಂಟ್‌ಗಳ ಪೈಕಿ ಶೇ.98ಕ್ಕೂ ಹೆಚ್ಚು ಪ್ರಕರಣಗಳನ್ನು ಬಳಕೆದಾರರಿಂದ ದೂರು ಬರುವ ಮೊದಲೇ ತನ್ನ ವ್ಯವಸ್ಥೆಗಳು ಗುರುತಿಸಿವೆ. ಜಾಗತಿಕ ಮಟ್ಟದಲ್ಲಿ ಇದೇ ಅವಧಿಯಲ್ಲಿ 3.32 ಕೋಟಿ ಕಂಟೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವುಗಳಲ್ಲಿ ಶೇ.97ಕ್ಕೂ ಹೆಚ್ಚು ಪ್ರಕರಣಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚಲಾಗಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ:
ಜಾಹೀರಾತುಗಳ ಹಿಂದಿನ ಅಕ್ರಮ ಜಾಲ ಪತ್ತೆಗೆ AI
ಅಕ್ರಮ ಕಂಟೆಂಟ್ ಹರಡುವವರು ಇದೀಗ ಜಾಹೀರಾತುಗಳನ್ನೂ ಬಳಸಿಕೊಳ್ಳುತ್ತಿರುವುದನ್ನು ಗುರುತಿಸಿರುವ ಮೆಟಾ, ಇಂತಹ ಚಟುವಟಿಕೆಗಳನ್ನು ಪತ್ತೆಹಚ್ಚಲು ಹೊಸ AI ಸಾಧನಗಳನ್ನು ಪರಿಚಯಿಸಿದೆ. ಮೇಲ್ನೋಟಕ್ಕೆ ಸಾಮಾನ್ಯವಾಗಿ ಕಾಣುವ ಜಾಹೀರಾತುಗಳು ಬಳಕೆದಾರರನ್ನು ಮೆಟಾದ ಹೊರಗಿನ ವೆಬ್‌ಸೈಟ್‌ಗಳಲ್ಲಿರುವ ಅಕ್ರಮ ವಿಷಯಗಳತ್ತ ಕರೆದೊಯ್ಯುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚಲು ಈ ತಂತ್ರಜ್ಞಾನ ನೆರವಾಗಲಿದೆ.
ಹೊಸ ವ್ಯವಸ್ಥೆಯ ಭಾಗವಾಗಿ, ಜಾಹೀರಾತಿನಲ್ಲಿರುವ ಪದಗಳು ಅಥವಾ ಚಿತ್ರಗಳನ್ನು ಮಾತ್ರವಲ್ಲದೆ ಅದು ಬಳಕೆದಾರರನ್ನು ಯಾವ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ ಎಂಬುದನ್ನೂ ಪರಿಶೀಲಿಸುವ ವ್ಯವಸ್ಥೆಯನ್ನು ಮೆಟಾ ಅಭಿವೃದ್ಧಿಪಡಿಸಿದೆ. ಅನುಮಾನಾಸ್ಪದ ಚಟುವಟಿಕೆ ಪತ್ತೆಯಾದ ಬಳಿಕ ಸಂಬಂಧಪಟ್ಟ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದು ಹಾಗೂ ಅಕ್ರಮ ಲಿಂಕ್‌ಗಳನ್ನು ನಿರ್ಬಂಧಿಸುವ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ.
ಸುರಕ್ಷತಾ ವ್ಯವಸ್ಥೆಗಳನ್ನೇ ಪರೀಕ್ಷಿಸುವ AI
ಮೆಟಾ ತನ್ನ ಭದ್ರತಾ ವ್ಯವಸ್ಥೆಗಳಲ್ಲಿರುವ ದುರ್ಬಲತೆಗಳನ್ನು ಪತ್ತೆಹಚ್ಚಲು AI ಆಧಾರಿತ ‘ರೆಡ್-ಟೀಮಿಂಗ್’ ವ್ಯವಸ್ಥೆಯನ್ನೂ ಬಳಸುತ್ತಿದೆ.
ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಅಕ್ರಮ ಚಟುವಟಿಕೆಗಳು ಡಿಜಿಟಲ್ ವೇದಿಕೆಗಳಲ್ಲಿ ಹೊಸ ರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಂತ್ರಜ್ಞಾನದ ಮೂಲಕ ಮುಂಚಿತವಾಗಿಯೇ ಪತ್ತೆಹಚ್ಚುವ ಪ್ರಯತ್ನಕ್ಕೆ ಮೆಟಾ ಒತ್ತು ನೀಡಿದೆ.



